ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ : ಆರೋಪಿಗೆ 20 ವರ್ಷ ಶಿಕ್ಷೆ..!

0
1

ಜಯಪುರ : ಅಪ್ರಾಪ್ತೆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹50 ಸಾವಿರ ದಂಡ ವಿಧಿಸಿ ಚಿಕ್ಕಮಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

ಜಯಪುರ ಪೊಲೀಸ್ ಠಾಣೆಯಲ್ಲಿ 2025ರ ಮಾರ್ಚ್ 26ರಂದು ದಾಖಲಾಗಿದ್ದ ಪ್ರಕರಣದಲ್ಲಿ, ಕೊಪ್ಪ ತಾಲೂಕಿನ ಹೆಗ್ಗಾರು ಗ್ರಾಮದ ಕರೆಮನೆ ನಿವಾಸಿ ಸಂತೋಷ್ ಕೆ.ಎಸ್. (31) ವಿರುದ್ಧ ಬಿಎನ್‌ಎಸ್ ಹಾಗೂ ಪೋಕ್ಸೊ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಚಿಕ್ಕಮಗಳೂರಿನ ಘನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹50,000 ದಂಡ ವಿಧಿಸಿದೆ. ಜೊತೆಗೆ ಕರ್ನಾಟಕ ಸಂತ್ರಸ್ತ ಪರಿಹಾರ ಯೋಜನೆ-2011ರಡಿ ನೊಂದ ಬಾಲಕಿಗೆ ₹4 ಲಕ್ಷ ಪರಿಹಾರ ಧನ ನೀಡುವಂತೆ ಆದೇಶಿಸಿದೆ.

ಪ್ರಕರಣದ ತನಿಖೆಯನ್ನು ಅಂದಿನ ಕೊಪ್ಪ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರಾಗಿದ್ದ ಮಂಜು ಜೆ. ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಬಿ. ಭರತ್ ಕುಮಾರ್ ವಾದ ಮಂಡಿಸಿದ್ದರು. ತನಿಖಾ ಸಹಾಯಕರಾಗಿ ಸಿ.ಎಚ್.ಸಿ. ತಿಪ್ಪೇಶ್ ಹಾಗೂ ನ್ಯಾಯಾಲಯದ ಕರ್ತವ್ಯವನ್ನು ಸಿ.ಪಿ.ಸಿ. ಆಕಾಶ್ ನಿರ್ವಹಿಸಿದ್ದರು.

LEAVE A REPLY

Please enter your comment!
Please enter your name here