ಶೌರ್ಯ ರಾವ್‌ ಗ್ಲೋಬಲ್‌ ಐಕಾನ್‌ ವ್ಯವಹಾರ ಮತ್ತು ಸಾಧಕರ ಪ್ರಶಸ್ತಿ 2026 ಗೆ ಆಯ್ಕೆ

0
107

ಮಂಗಳೂರಿನ ಎಸ್‌ಡಿಎಂ ಶಾಲೆಯ 4ನೇ ತರಗತಿ ವಿದ್ಯಾರ್ಥಿ ಶೌರ್ಯ ರಾವ್ (ವಯಸ್ಸು 9) ಈಗಾಗಲೇ ಕಲಾ ಲೋಕದಲ್ಲಿ ವಿಶಿಷ್ಟ ಗುರುತನ್ನು ಪಡೆದುಕೊಂಡಿರುವ ಬಾಲಪ್ರತಿಭೆ. ಶ್ರೀನಿಧಿ ರಾವ್ ಮತ್ತು ಅಶ್ವಿನಿ ರಾವ್ ದಂಪತಿಯ ಪುತ್ರನಾದ ಶೌರ್ಯ, ಅತಿ ಕಿರಿಯ ವಯಸ್ಸಲ್ಲೇ ಬಹುಮುಖ ಪ್ರತಿಭೆ ತೋರಿಸುತ್ತಿದ್ದಾರೆ.

ನೃತ್ಯ, ಅಭಿನಯ, ಈಜು, ಯೋಗ, ಥಲಿಮ್, ಕ್ಯಾಲಿಸ್ಥೆನಿಕ್ಸ್, ಫ್ರೀಸ್ಟೈಲ್ ಜಿಮ್ನಾಸ್ಟಿಕ್ಸ್, ಗಾಯನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಶೌರ್ಯ ಪರಿಣತಿ ಹೊಂದಿದ್ದಾರೆ. ಕುಡ್ಲ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಸೆಮಿಫೈನಲಿಸ್ಟ್ ಆಗಿ ಹೊರಹೊಮ್ಮಿದ ಅವರು, ನೇರವಾಗಿ ‘ಕರ್ನಾಟಕ ಬೆಸ್ಟ್ ಡ್ಯಾನ್ಸರ್’ ಸ್ಪರ್ಧೆಗೆ ಆಯ್ಕೆಯಾಗಿದ್ದರು.

ಶೌರ್ಯ ಈಗಾಗಲೇ 2 ಕನ್ನಡ ಚಲನಚಿತ್ರಗಳು ಮತ್ತು 3 ಆಲ್ಬಮ್ ಹಾಡುಗಳಲ್ಲಿ ಬಾಲ ಕಲಾವಿದನಾಗಿ ಅಭಿನಯಿಸಿದ್ದು, 4 ಹೊಸ ಸಿನಿಮಾಗಳು ಸದ್ಯದಲ್ಲೇ ಬಿಡುಗಡೆಗೆ ಸಿದ್ಧವಾಗಿವೆ.

ಅವರು ‘ಲಿಟಲ್ ಕಿಂಗ್ ಆಫ್ ಮಂಗಳೂರು – 2023’, ಕಿಡ್ಸ್ ಫ್ಯೂಷನ್ – 2024 (ಟೈಟಲ್ ವಿಜೇತ), ಪ್ರಿನ್ಸ್ ಆಫ್ ಕರಾವಳಿ – 2025 (ವಿಜೇತ), ಜೂನಿಯರ್ ಮಿಸ್ಟರ್ ಇಂಡಿಯಾ – 2025 (ಪ್ರಥಮ ರನ್ನರ್ ಅಪ್) ಹಾಗೂ ಜೂನಿಯರ್ ಮಾಡೆಲ್ ಇಂಟರ್‌ನ್ಯಾಷನಲ್ (ಪ್ರಥಮ ರನ್ನರ್ ಅಪ್) ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

‘ಮರಿ ಹುಲಿ ಮಂಗಳೂರು’ ಎಂಬ ಹೆಸರಿನಿಂದ ಪ್ರಸಿದ್ಧರಾಗಿರುವ ಶೌರ್ಯ, 2024 ಮತ್ತು 2025ರಲ್ಲಿ ಪಿಲಿಗೊಬ್ಬು ಹಾಗೂ ಪಿಲಿಪರ್ಭಾ ಕಾರ್ಯಕ್ರಮಗಳಲ್ಲಿ ಮರಿ ಹುಲಿ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಕಳೆದ ಒಂದು ವರ್ಷದಲ್ಲಿ ಅವರು 180ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸಿ, 90ಕ್ಕೂ ಅಧಿಕ ಪ್ರಶಸ್ತಿ ಮತ್ತು ಗೌರವಗಳನ್ನು ಗಳಿಸಿದ್ದಾರೆ.

ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಕನ್ನಡ ಚಿತ್ರರಂಗದ ದಿಗ್ಗಜ ನಟ ಅನಂತನಾಗ್ ಅವರ 75ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ, ಸ್ವತಃ ಅನಂತನಾಗ್ ಅವರು ಶೌರ್ಯ ರಾವ್ ಅವರ ಹೆಸರು ಮತ್ತು ಪ್ರತಿಭೆಯನ್ನು ವಿಶೇಷವಾಗಿ ಉಲ್ಲೇಖಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಶೌರ್ಯನ ಸಾಧನೆಗೆ ಮತ್ತೊಂದು ಮಹತ್ವದ ಗೌರವವಾಗಿದೆ.

ಚಿಕ್ಕ ವಯಸ್ಸಿನಲ್ಲೇ ದೊಡ್ಡ ಕನಸುಗಳನ್ನು ಹೊತ್ತಿರುವ ಶೌರ್ಯ ರಾವ್, ಭವಿಷ್ಯದಲ್ಲಿ ಕನ್ನಡ ಚಿತ್ರರಂಗ ಹಾಗೂ ಕಲಾ ಕ್ಷೇತ್ರಕ್ಕೆ ಹೆಮ್ಮೆಯ ಹೆಸರಾಗುವ ಭರವಸೆಯನ್ನು ಮೂಡಿಸಿದ್ದಾರೆ.

LEAVE A REPLY

Please enter your comment!
Please enter your name here