ಮೂಡುಬಿದಿರೆ : ರೋಟರಿ ಕ್ಲಬ್ ಮೂಡುಬಿದಿರೆ ಮಿಡ್ ಟೌನ್, ಪವರ್ ಫ್ರೆಂಡ್ಸ್ ಬೆದ್ರ ಹಾಗೂ ದಾನಿಗಳ ಸಹಯೋಗದಲ್ಲಿ ಮಾರೂರಿನ ವಸತಿ ರಹಿತ ನಿಷ್ಠಾವಂತ ಕುಶಲಕರ್ಮಿ ಸರಸ್ವತಿ–ಸದಾಶಿವ ಆಚಾರ್ಯ ಅವರ ಕುಟುಂಬಕ್ಕೆ ನಿರ್ಮಿಸಿಕೊಟ್ಟ ‘ಶ್ರೀ ಕಾಳಿಕಾಂಬ’ ಹೆಸರಿನ ನೂತನ ಮನೆಯ ಹಸ್ತಾಂತರ ಕಾರ್ಯಕ್ರಮ ಬುಧವಾರ ಮಾರೂರಿನಲ್ಲಿ ನಡೆಯಿತು.
ನೂತನ ಮನೆಯನ್ನು ಹಸ್ತಾಂತರಿಸಿ ಮಾತನಾಡಿದ ರೋಟರಿ ಜಿಲ್ಲೆ 3181ರ ವಲಯ-3ರ ಅಸಿಸ್ಟೆಂಟ್ ಗವರ್ನರ್ ಜೋಯೆಲ್ ಡಿಸೋಜ, ವಸತಿ ರಹಿತ ಕುಟುಂಬಗಳನ್ನು ಗುರುತಿಸಿ ದಾನಿಗಳ ನೆರವಿನಿಂದ ಅವರಿಗೆ ಸ್ವಂತ ಸೂರು ಕಲ್ಪಿಸುವುದು ಅತ್ಯುತ್ತಮ ಸೇವಾಕಾರ್ಯವಾಗಿದೆ. ಇಂತಹ ಜನಪರ ಕಾರ್ಯಗಳನ್ನು ರೋಟರಿ ಮಿಡ್ ಟೌನ್ ಮುಂದುವರಿಸಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಹಕಾರಿ ಧುರೀಣ ಪಡುಮಾರ್ನಾಡು ದಯಾನಂದ ಪೈ ವಹಿಸಿದ್ದರು. ರೋಟರಿ ಜಿಲ್ಲೆ 3181ರ ವಲಯ-3ರ ಮಾಜಿ ಅಸಿಸ್ಟೆಂಟ್ ಗವರ್ನರ್ ರೋಬರ್ಟ್ ಫ್ರಾಂಕ್ಲಿನ್ ರೇಗೋ ಹಾಗೂ ರೋಟರಿ ಮಿಡ್ ಟೌನ್‌ನ ನಿರ್ಗಮನ ಅಧ್ಯಕ್ಷ ಕರುಣಾಕರ ದೇವಾಡಿಗ ಮಾತನಾಡಿದರು.
ಮನೆ ನಿರ್ಮಾಣಕ್ಕೆ ಸಹಕಾರ ನೀಡಿದ ಪ್ರಮುಖ ದಾನಿ ಇರುಬೈಲು ಕುಮಾರ ಪೂಜಾರಿ, ಪವರ್ ಫ್ರೆಂಡ್ಸ್ ಬೆದ್ರದ ಅಧ್ಯಕ್ಷ ವಿನಯಕುಮಾರ್ ಹಾಗೂ ಕಾರ್ಯದರ್ಶಿ ಜಯಪ್ರಕಾಶ್ ಭಂಡಾರಿ ಅವರನ್ನು ಬಲಿವ ಪ್ರಸಾದ ಭಾಗವತ ಪಂಚಾಶತ್ ಸ್ಮರಣ್ – ಪಂಚಾಶತ್ ಸಮ್ಮಾನ್ ಸರಣಿ ಕಾರ್ಯಕ್ರಮದ ವತಿಯಿಂದ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ದಾನಿಗಳಾದ ಸಿ.ಎಚ್. ಅಬ್ದುಲ್ ಗಫೂರ್, ತುಳುನಾಡ ಸೇನೆಯ ಸಂಸ್ಥಾಪಕ ಸುರೇಶ್ ಶೆಟ್ಟಿ ಹರಿಮೀನಾಕ್ಷಿ ಅವರ ಪರವಾಗಿ ಲಕ್ಷ್ಮೀಶ್ ಶೆಟ್ಟಿ, ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್ ತಂಡದ ಅಧ್ಯಕ್ಷ ಸುನಿಲ್ ಮೆಂಡೋನ್ನಾ ಸೇರಿದಂತೆ ಹಲವರನ್ನು ಗೌರವಿಸಲಾಯಿತು.
ರೋಟರಿ ಮಿಡ್ ಟೌನ್‌ನ ನೂತನ ಅಧ್ಯಕ್ಷ ಮುರಳೀಧರ ಕೋಟ್ಯಾನ್, ನಿರ್ಗಮನ ಅಧ್ಯಕ್ಷ ಕರುಣಾಕರ ದೇವಾಡಿಗ, ಅಭಿನಂದನ್ ಬಲ್ಲಾಳ್, ವಿದೇಶ್ ಎಂ., ಸುಶಾಂತ್ ಕರ್ಕೇರ, ಮಹಮ್ಮದ್ ಅಕ್ರಮ್, ಮೂಡುಬಿದಿರೆ ಲಯನ್ಸ್ ಕ್ಲಬ್ ಅಧ್ಯಕ್ಷ ರಿಚರ್ಡ್ ಕರ್ಡೊಜಾ, ನಿರ್ಗಮನ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ, ಗಣೇಶ್ ನಾಯಕ್ ಬಾರ್ದಿಲ, ಶಂಕರ ಆಚಾರ್ಯ ಮಾರೂರು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಆನ್ ಮಿನೇಜಸ್ ಸನ್ಮಾನ ಪತ್ರ ವಾಚಿಸಿದರು. ಪ್ರಶಾಂತ್ ಭಂಡಾರಿ ಹಾಗೂ ಕೃಷ್ಣಕುಮಾರ್ ಕಾರ್ಯಕ್ರಮ ನಿರೂಪಿಸಿದರು.

