ಶಿವಮೊಗ್ಗ: ಕ್ರಿಕೆಟ್ ಆಟದ ವೇಳೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ ಕಂಡಿದೆ. ಭದ್ರಾವತಿಯ ಹೊಸಮನೆ ಬಡಾವಣೆಯಲ್ಲಿ ಘಟನೆ ನಡೆದಿದೆ. ಅರುಣ್ (23) ಮೃತ ದುರ್ದೈವಿ. ಸಂಜಯ್ (20) ಎಂಬುವರಿಗೆ ಗಂಭೀರ ಗಾಯವಾಗಿದೆ. ಅರುಣ್, ಸಚಿನ್, ಸಂಜು, ಪ್ರಜ್ವಲ್ ಕೊಲೆ ಮಾಡಿದ ಆರೋಪಿಗಳು.
ಅರುಣ್, ಸಚಿನ್, ಸಂಜು, ಪ್ರಜ್ವಲ್, ಕೊಲೆಯಾದ ಅರುಣ್ ಮತ್ತು ಸಂಜಯ್ ಸ್ನೇಹಿತರಾಗಿದ್ದಾರೆ. ಇವೆರಲ್ಲರೂ ಒಟ್ಟಾಗಿ ಸೋಮವಾರ ಭದ್ರಾವತಿಯ ಹೊಸಮನೆ ಬಡಾವಣೆಯ ಶಾಲಾ ಮೈದಾನವೊಂದರಲ್ಲಿ ಕ್ರಿಕೆಟ್ ಆಡಿದ್ದಾರೆ. ಕ್ರಿಕೆಟ್ ಆಡುತ್ತಿದ್ದ ವೇಳೆ ಯಾವುದೋ ಕಾರಣಕ್ಕೆ ಗಲಾಟೆಯಾಗಿದೆ.
ನಂತರ, ಕೊಲೆಯಾದ ಅರುಣ್ ಸಂಜೆ ಕ್ರಿಕೆಟ್ ಆಟವಾಡಿ ಮನೆಗೆ ತೆರಳಿದ್ದಾರೆ. ನಂತರ, ಅರುಣ್, ಸಚಿನ್, ಸಂಜು, ಪ್ರಜ್ವಲ್ ಮದ್ಯ ಸೇವಿಸುತ್ತಾ ಕುಳಿತಿದ್ದಾಗ, ಕೊಲೆಯಾದ ಅರುಣ್ನನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಅರುಣ್ ಜೊತೆಗೆ ಸಂಜಯ್ ಕೂಡ ಬಂದಿದ್ದಾರೆ. ಈ ವೇಳೆ ಆರೋಪಿಗಳು ಜಗಳ ತೆಗೆದು, ಚಾಕುವಿನಿಂದ ಅರುಣ್ನ ಎದೆ ಭಾಗಕ್ಕೆ ಚುಚ್ಚಿ ಕೊಲೆ ಮಾಡಿದ್ದಾರೆ. ಅರುಣ್ ಜೊತೆ ಜಗಳಕ್ಕೆ ನಿಂತ ಸಂಜಯ್ ಕೈ ಹಾಗೂ ಬೆನ್ನಿನ ಭಾಗಕ್ಕೆ ಚಾಕುವಿನಿಂದ ಇರಿಯಲಾಗಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಇನ್ನು, ಕೊಲೆ ಮಾಡಿದ ಬಳಿಕ ಆರೋಪಿಗಳಾದ ಅರುಣ್, ಸಚಿನ್, ಸಂಜು, ಪ್ರಜ್ವಲ್ ಸೇರಿದಂತೆ ಇನ್ನೂ ನಾಲ್ಕೈದು ಜನ ಯುವಕರು ಸ್ಥಳದಿಂದ ಪರಾರಿಯಾಗಿದ್ದಾರೆ. ಇವರಲ್ಲಿ ಐವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಮೃತ ಅರುಣ್, ಸಚಿನ್ ಎಂಬಾತನ ಕಪಾಳಕ್ಕೆ ಹೊಡೆದ ಹಿನ್ನೆಲೆಯಲ್ಲಿ ಗಲಾಟೆ ನಡೆದಿತ್ತು ಎಂದು ಬಾಯಿ ಬಿಟ್ಟಿದ್ದಾರೆ. ಹೊಸಮನೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಟ್ಟಾರೆಯಾಗಿ, ಕ್ರಿಕೆಟ್ ಆಟ ಆಡುತ್ತಿದ್ದ ಸಂದರ್ಭದಲ್ಲಿ ಜಗಳ ಮಾತಿಗೆ ಮಾತು ಬೆಳೆದು ಕೊಲೆಯಲ್ಲಿ ಅಂತ್ಯವಾಗಿರುವುದು ದುರಂತ. ಅದರಲ್ಲೂ ಸ್ನೇಹಿತರೇ, ದುಷ್ಮನ್ಗಳಾಗಿ ಓರ್ವನ ಜೀವ ತೆಗೆಯುವ ಮಟ್ಟಿಗೆ ಸೇಡು, ಜಿದ್ದು ಬೆಳೆಸಿಕೊಂಡಿದ್ದು ದುರದೃಷ್ಟಕರ.