ಮೊಟ್ಟೆ ಒಡೆದಾಗ ಶಾಕ್ : ಒಳಗೆ ಹರಿದಾಡುತ್ತಿದ್ದವು ಜೀವಂತ ಹುಳುಗಳು!

0
88

ಮಂಗಳೂರು : ಕ್ಷಿಪ್ರ ಡೆಲಿವರಿ ಆ್ಯಪ್‌ಗಳ ಮೂಲಕ ಮನೆಬಾಗಿಲಿಗೆ ತರಿಸಿಕೊಳ್ಳುವ ಆಹಾರ ಪದಾರ್ಥಗಳ ಗುಣಮಟ್ಟದ ಬಗ್ಗೆ ಮತ್ತೊಮ್ಮೆ ಗಂಭೀರ ಪ್ರಶ್ನೆ ಎದ್ದಿದೆ. ಕರಾವಳಿ ನಗರಿ ಮಂಗಳೂರಿನಲ್ಲಿ ಆನ್‌ಲೈನ್ ಡೆಲಿವರಿ ಸಂಸ್ಥೆ ಬ್ಲಿಂಕಿಟ್ ಮೂಲಕ ಆರ್ಡರ್ ಮಾಡಿದ್ದ ಮೊಟ್ಟೆಯೊಂದರಲ್ಲಿ ಜೀವಂತ ಹುಳುಗಳು ಪತ್ತೆಯಾಗಿರುವ ಘಟನೆ ಗ್ರಾಹಕರಲ್ಲಿ ಆತಂಕ ಮೂಡಿಸಿದೆ.

ಮಂಗಳೂರಿನ ಫಳ್ನೀರ್‌ನಲ್ಲಿರುವ ಬ್ಲಿಂಕಿಟ್ ಹಬ್‌ನಿಂದ ಗ್ರಾಹಕರೊಬ್ಬರು ಮೊಟ್ಟೆಗಳನ್ನು ಆನ್‌ಲೈನ್ ಮೂಲಕ ಆರ್ಡರ್ ಮಾಡಿದ್ದರು. ಮನೆಗೆ ಬಂದ ಪ್ಯಾಕೆಟ್‌ನಲ್ಲಿದ್ದ ಮೊಟ್ಟೆಯನ್ನು ಒಡೆದು ನೋಡಿದಾಗ ಅದರೊಳಗೆ ಹುಳುಗಳು ಜೀವಂತವಾಗಿ ಹರಿದಾಡುತ್ತಿರುವುದು ಕಂಡುಬಂದಿದೆ ಎನ್ನಲಾಗಿದೆ. ಇದರಿಂದ ಬೆಚ್ಚಿಬಿದ್ದ ಗ್ರಾಹಕರು, ಆನ್‌ಲೈನ್ ವೇದಿಕೆಗಳ ಮೂಲಕ ಹಳೆಯ ಹಾಗೂ ಬಳಕೆಗೆ ಯೋಗ್ಯವಲ್ಲದ ಆಹಾರ ಪದಾರ್ಥಗಳನ್ನು ಪೂರೈಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆ ಕುರಿತು ಗ್ರಾಹಕರು ವಿಧಾನಸಭಾಧ್ಯಕ್ಷ ಹಾಗೂ ಸ್ಥಳೀಯ ಶಾಸಕ ಯು.ಟಿ. ಖಾದರ್ ಅವರ ಗಮನಕ್ಕೆ ತಂದು ದೂರು ಸಲ್ಲಿಸಿದ್ದಾರೆ. ದೂರು ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ.

ಅಧಿಕಾರಿಗಳ ತಂಡ ಫಳ್ನೀರ್‌ನಲ್ಲಿರುವ ಬ್ಲಿಂಕಿಟ್ ಸಂಸ್ಥೆಯ ಮಳಿಗೆ ಹಾಗೂ ಗೋಡೌನ್‌ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ತಪಾಸಣೆ ವೇಳೆ ದಾಸ್ತಾನಿನಲ್ಲಿ ಇರಿಸಲಾಗಿದ್ದ ಹಲವು ಮೊಟ್ಟೆಗಳ ಪ್ಯಾಕೆಟ್‌ಗಳು ಒಡೆದು ಹೋಗಿದ್ದು, ಅವುಗಳಲ್ಲಿ ಕೆಲವು ಕೊಳೆತು ತೀವ್ರ ದುರ್ವಾಸನೆ ಬೀರುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ ಎಂದು ತಿಳಿದುಬಂದಿದೆ.

ಗ್ರಾಹಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಇಂತಹ ಕೊಳೆತ ಹಾಗೂ ಒಡೆದ ಮೊಟ್ಟೆಗಳ ಪ್ಯಾಕೆಟ್‌ಗಳನ್ನು ತಕ್ಷಣವೇ ಸ್ಥಳದಿಂದ ತೆರವುಗೊಳಿಸುವಂತೆ ಅಧಿಕಾರಿಗಳು ಬ್ಲಿಂಕಿಟ್ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮುಂದಿನ ಕ್ರಮದ ಭಾಗವಾಗಿ ಮಳಿಗೆಯ ಸಂಗ್ರಹಣಾ ಕೊಠಡಿಯನ್ನು ತಾತ್ಕಾಲಿಕವಾಗಿ ಸೀಲ್ ಮಾಡಲು ನಿರ್ಧರಿಸಲಾಗಿದ್ದು, ಸಂಸ್ಥೆಗೆ ನೋಟಿಸ್ ಜಾರಿ ಮಾಡಿ ಘಟನೆ ಕುರಿತು ಸೂಕ್ತ ಸಮಜಾಯಿಷಿ ನೀಡುವಂತೆ ಸೂಚಿಸಲಾಗಿದೆ.

ಆನ್‌ಲೈನ್ ಮೂಲಕ ಆಹಾರ ಪದಾರ್ಥಗಳನ್ನು ಪೂರೈಸುವ ಸಂಸ್ಥೆಗಳು ಉತ್ಪನ್ನಗಳ ಗುಣಮಟ್ಟ, ಸಂಗ್ರಹಣೆ ಹಾಗೂ ಅವಧಿ ಕುರಿತು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಬೇಕು. ಗ್ರಾಹಕರ ಆರೋಗ್ಯದೊಂದಿಗೆ ಯಾವುದೇ ರೀತಿಯ ನಿರ್ಲಕ್ಷ್ಯಕ್ಕೆ ಅವಕಾಶ ನೀಡಬಾರದು ಎಂಬ ಆಗ್ರಹವೂ ಇದೀಗ ಕೇಳಿಬಂದಿದೆ.