ಆದರ್ಶ ಗ್ರಾಮಾಭಿವೃದ್ಧಿ ಸಂಸ್ಥೆಯ ರಜತ ಮಹೋತ್ಸವ

0
44

ವರದಿ ರಾಯಿ ರಾಜ ಕುಮಾರ
ಭೇದರಹಿತವಾಗಿ ಆರೋಗ್ಯ, ಶಿಕ್ಷಣ ಎಲ್ಲವನ್ನು ಎಲ್ಲರೂ ಒಟ್ಟು ಸೇರಿ ಸುಖಿ ರಾಜ್ಯದ ಕಲ್ಪನೆ ಯೊಂದಿಗೆ ಸಮಪಾಲು, ಸಮ ಬಾಳನ್ನು ಸಾಕಾರಗೊಳಿಸಿದೆ ಆದರ್ಶ ಸಂಸ್ಥೆ. ಸಮಾನತೆಯ ಆಧಾರದಲ್ಲಿ ತನು ಮನ ಧನ ಸಹಕಾರ ತತ್ವವನ್ನು ಶಾಂತಿ ನೆಮ್ಮದಿಯೊಂದಿಗೆ ನೆಲೆಗೊಳಿಸಬಹುದು. ಅದಕ್ಕಾಗಿ ಒಳ್ಳೆಯ ಮಾತನಾಡಿ ಸ್ವಚ್ಛ ಪರಿಸರ ಪ್ರೇಮವನ್ನು ಬೆಳೆಸಿಕೊಳ್ಳಿ ಎಂದು ತಮ್ಮ ಆಶೀರ್ವಚನದಲ್ಲಿ ಮೂಡುಬಿದಿರೆ ಜೈನ ಮಠದ ಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿ ಆಶಿಸಿದರು. ಅವರು ಡಿಸೆಂಬರ್ 21 ರಂದು ಸಮಾಜ ಮಂದಿರದಲ್ಲಿ ಜರುಗಿದ ಆದರ್ಶ ಗ್ರಾಮಾಭಿವೃದ್ಧಿ ಮತ್ತು ಸೇವಾ ಸಂಸ್ಥೆಯ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದ ದ ಕ ಜಿಲ್ಲಾ ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷ ಎಸ್ ಆರ್ ಸತೀಶ್ಚಂದ್ರ ಸ್ವಾವಲಂಬನೆಯನ್ನು ಬೆಳೆಸಿದ ತಾಯಂದಿರ ಪಾತ್ರವನ್ನು ಮೆಚ್ಚಿಕೊಂಡರು. ಸಂಘಟನೆಯನ್ನು ಬಲಗೊಳಿಸಿದ ಎಲ್ಲರನ್ನು ಹೊಗಳಿದರು. ಇಂತಹ ಸಶಕ್ತ ಮಹಿಳೆಯರಿಂದ ಮಾತ್ರ ಪ್ರಪಂಚದಲ್ಲಿ ಆಪರೇಷನ್ ಸಿಂಧೂರ ದಂತಹ ಕ್ರಮ ಜರುಗಿ ಭಾರತ ಉಳಿದು ಬೆಳಗಲು ಸಾಧ್ಯ ಎಂದರು. ಮಹಿಳೆಯರಿಗೆ ಶಕ್ತಿ ನೀಡಿದ ಎಲ್ಲರನ್ನೂ ಮಾಜಿ ಸಚಿವ ಅಭಯಚಂದ್ರ ಜೈನ್ ಸ್ಮರಿಸಿಕೊಂಡರು. ಕುಟುಂಬ ಜೀವನ ನಿರ್ವಹಣೆಗಾಗಿ ಸಂಪಿಗೆ ಸುದೀಕ್ಷಾ ಸಂಘದ ಜಯಂತಿಗೆ ಸಹಾಯ ಹಸ್ತದ ಕೀಲಿಕೈ ಹಸ್ತಾಂತರಿಸಲಾಯ್ತು. ಕ್ರೀಡಾಕೂಟದಲ್ಲಿ ಚಾಂಪಿಯನ್ ರಾದ ಮೂಡಾರು ವಲಯದ ಪರವಾಗಿ ವಿನಯ ಶೆಟ್ಟಿ ತಂಡ, ರನ್ನರ್ ಅಪ್ ಬೆಳುವಾಯಿ ವಲಯದ ಪರವಾಗಿ ರೇಣುಕಾ ತಂಡ ಪ್ರಶಸ್ತಿ ಸ್ವೀಕರಿಸಿತು. ಕಚೇರಿಯಲ್ಲಿ ಪ್ರಾರಂಭದಿಂದಲೂ ಉತ್ತಮ ಸಹಾಯಕರಾಗಿ ಸೇವೆ ಸಲ್ಲಿಸಿದ ಧರ್ಮಿಣಿ ಹಾಗೂ ಜಯಂತಿ ಅವರುಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಬನ್ನಡ್ಕ ಸಿ ಎಸ್ ಐ ಚರ್ಚಿನ ಸಂತೋಷ್ ಕುಮಾರ್, ಉಪಾಧ್ಯಕ್ಷ ಹಸ್ದುಲ್ಲ ಇಸ್ಮಾಯಿಲ್, ನಿರ್ದೇಶಕಿ ಶೆರ್ಲಿ ಟಿ ಬಾಬು, ಹಾಜರಿದ್ದರು.

ಪ್ರಾರಂಭದಲ್ಲಿ ಸ್ವಸಹಾಯ ಸಂಘಗಳ ಸದಸ್ಯರು ಮತ್ತು ಹಿತೈಷಿಗಳಿಂದ ಜ್ಯೋತಿನಗರ ಶಾಲಾ ಬಳಿಯಿಂದ ಸಮಾಜ ಮಂದಿರದ ತನಕ ಭವ್ಯ ಮೆರವಣಿಗೆ ನಡೆಯಿತು. ಸಂಸ್ಥೆಯ ಅಧ್ಯಕ್ಷ ಜೇಕಬ್ ವರ್ಗೀಸ್ ಪ್ರಾಸ್ತಾವಿಕ ಮಾತನಾಡಿದರು. ಇಮಾನ್ಯುಯಲ್ ಮೋನಿಸ್, ಜಯಶ್ರೀ, ಶ್ರೀಲತಾ, ಪದ್ಮಲತಾ ಕಾರ್ಯಕ್ರಮ ನಿರ್ವಹಿಸಿದರು. ಪಾಲುದಾರರೇ ಪಾತ್ರಧಾರಿಗಳಾದ ಎಲ್ಲಾ ಸ್ವಸಹಾಯ ಸಂಘಗಳ ಸದಸ್ಯರುಗಳು, ಅಧ್ಯಕ್ಷರುಗಳು ಕಾರ್ಯಕ್ರಮ ಸಂಘಟಿಸಿದ್ದರು. ಸಂಚಾಲಕ ಗಣೇಶ್ ಬಾರ್ದಿಲ ವಂದಿಸಿದರು.

LEAVE A REPLY

Please enter your comment!
Please enter your name here