ಅಜೆಕಾರು ಕಲಾಭಿಮಾನಿ ಬಳಗದ ರಜತಪರ್ವ: ಮುಂಬಯಿ ಯಕ್ಷಗಾನ ಸಮ್ಮೇಳನ – 2026

0
15
ಸಮ್ಮೇಳನಾಧ್ಯಕ್ಷರಿಗೆ ಆಮಂತ್ರಣ

ಅತಿಥಿ ಗಣ್ಯರಿಗೆ ಆಹ್ವಾನ ಪತ್ರಿಕೆ ವಿತರಣೆ

ಮುಂಬಯಿ: ಕಳೆದ 25 ವರ್ಷಗಳಿಂದ ಮುಂಬೈ ನಗರದ ಉದ್ದಗಲಕ್ಕೆ ಯಕ್ಷಗಾನ ಶಿಕ್ಷಣ, ಬಯಲಾಟ, ಸರಣಿ ತಾಳಮದ್ದಳೆ, ಗ್ರಂಥ ಪ್ರಕಟಣೆ, ಕಲಾವಿದರ ಸಮ್ಮಾನ – ಪ್ರಶಸ್ತಿ ಪ್ರದಾನ ಮುಂತಾದ ಮಹತ್ವದ ಕಾರ್ಯ ಚಟುವಟಿಕೆಗಳ ಮೂಲಕ ಮನೆ ಮಾತಾಗಿರುವ ಅಜೆಕಾರು ಕಲಾಭಿಮಾನಿ ಬಳಗಕ್ಕೆ ಇದೀಗ ರಜತ ಪರ್ವ ಸಂಭ್ರಮ. ಅದಕ್ಕಾಗಿ ಅಕ್ಟೋಬರ 3 ಮತ್ತು 4 ರಂದು ಮುಂಬೈ ಕುರ್ಲಾದ ಬಂಟರ ಭವನದಲ್ಲಿ ಜರಗುವ ‘ಮುಂಬಯಿ ಯಕ್ಷಗಾನ ಸಮ್ಮೇಳನ – 2026’ ಇದರ ಆಮಂತ್ರಣ ಪತ್ರಿಕೆ ವಿತರಿಸುವ ಕಾರ್ಯ ಭರದಿಂದ ಸಾಗಿದೆ.

ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟರ ನೇತೃತ್ವದಲ್ಲಿ ಸಮ್ಮೇಳನದ ಸಲಹೆಗಾರರಾದ ಯಕ್ಷಗಾನ ವಿದ್ವಾಂಸ ಡಾ. ಎಂ.ಪ್ರಭಾಕರ ಜೋಶಿ ಮತ್ತು ಪ್ರಧಾನ ಸಂಚಾಲಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿಯವರನ್ನೊಳಗೊಂಡ ಸಮಿತಿ ಪದಾಧಿಕಾರಿಗಳು ವಿವಿಧ ಕ್ಷೇತ್ರದ ಗಣ್ಯರಿಗೆ ಕರೆಯೋಲೆ ನೀಡಿ ಆಮಂತ್ರಿಸಿದರು.
ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು, ಮಾತೃಶ್ರೀ ಹೇಮಾವತಿ ಡಿ.ಹೆಗ್ಗಡೆಯವರು, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅವರನ್ನು ಭೇಟಿಯಾದ ಸಂಘಟಕರು ಆಮಂತ್ರಣ ಪತ್ರಿಕೆ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.

ಸಮ್ಮೇಳನಾಧ್ಯಕ್ಷರಿಗೆ ಆಮಂತ್ರಣ:ಅಜೆಕಾರು ಕಲಾಭಿಮಾನಿ ಬಳಗದ ಆಶ್ರಯದಲ್ಲಿ ಎರಡು ದಿನ ನಡೆಯುವ ಮುಂಬಯಿ ಯಕ್ಷಗಾನ ಸಮ್ಮೇಳನದ ಸರ್ವಾಧ್ಯಕ್ಷರು ಯಕ್ಷಗಾನ ಕಲಾ ಪೋಷಕರು ಮತ್ತು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಅಧ್ಯಕ್ಷ ಡಾ. ಟಿ.ಶ್ಯಾಮ ಭಟ್. ಸೆಪ್ಟೆಂಬರ 26 ರಂದು ಕಾಸರಗೋಡಿನ ಎಡನೀರು ಮಠದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ ಅವರನ್ನು ಭೇಟಿ ಮಾಡಿದ ಮುಖ್ಯ ಸಲಹೆಗಾರ ಡಾ.ಎಂ ಪ್ರಭಾಕರ ಜೋಶಿ ಮತ್ತು ಪ್ರಧಾನ ಸಂಚಾಲಕ ಭಾಸ್ಕರ ರೈ ಕುಕ್ಕುವಳ್ಳಿ ವಿಧ್ಯುಕ್ತವಾಗಿ ಸಮ್ಮೇಳನಕ್ಕೆ ಆಹ್ವಾನ ನೀಡಿದರು. ಸಮಿತಿ ಸದಸ್ಯ ಹಾಗೂ ಹನುಮಗಿರಿ ಮೇಳದ ಪ್ರಬಂಧಕ ಹರೀಶ್ ಭಟ್ ಬಳಂತಿಮೊಗರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.