ಕರಾವಳಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಸುಸಜ್ಜಿತ ಉಡುಪಿ ಹೆರಿಟೇಜ್ ಫುಡ್ ಸ್ಟ್ರೀಟ್ ನಿರ್ಮಾಣಕ್ಕೆ ಮನವಿ

0
22

ಬ್ರಹ್ಮಾವರ: ಕರಾವಳಿ ಪ್ರವಾಸೋದ್ಯಮದ ಅಭಿವೃದ್ಧಿ ಹಾಗೂ ಉಡುಪಿ ನಗರದ ಪ್ರವಾಸಿಗರ ಆಕರ್ಷಣೆಯನ್ನು ಹೆಚ್ಚಿಸುವ ಉದ್ದೇಶದಿಂದ, ಉಡುಪಿ ನಗರ ಭಾಗದಲ್ಲಿ ಆಧುನಿಕ ಹಾಗೂ ಸುಸಜ್ಜಿತ ಫುಡ್ ಕೋರ್ಟ್ ನಿರ್ಮಿಸುವಂತೆ ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ವತಿಯಿಂದ ಮಾನ್ಯ ಶಾಸಕರಿಗೆ ಮನವಿ ಸಲ್ಲಿಸಲಾಯಿತು.

ಉಡುಪಿ ಜಿಲ್ಲೆಗೆ ದೇಶ-ವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಸ್ಥಳೀಯ ಕರಾವಳಿ ಆಹಾರ, ಸಾಂಪ್ರದಾಯಿಕ ತಿಂಡಿ-ತಿನಿಸುಗಳು ಹಾಗೂ ಸ್ಥಳೀಯ ಉತ್ಪನ್ನಗಳನ್ನು ಒಂದೇ ಸ್ಥಳದಲ್ಲಿ ಪರಿಚಯಿಸುವಂತಹ ಸುಸಜ್ಜಿತ ಫುಡ್ ಸ್ಟ್ರೀಟ್ ನಿರ್ಮಾಣವಾದರೆ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ದೊರೆಯಲಿದೆ.
ಇಂತಹ ವ್ಯವಸ್ಥೆಯಿಂದ ಪ್ರವಾಸಿಗರಿಗೆ ಉತ್ತಮ ಆಹಾರ ಮತ್ತು ಸ್ವಚ್ಛ ವಾತಾವರಣ ಒದಗಿಸುವುದರ ಜೊತೆಗೆ, ಸ್ಥಳೀಯ ಹೋಟೆಲ್ ಉದ್ಯಮಿಗಳು, ಸಣ್ಣ ವ್ಯಾಪಾರಿಗಳು ಹಾಗೂ ಸ್ವಸಹಾಯ ಸಂಘಗಳಿಗೆ ಉದ್ಯೋಗ ಮತ್ತು ವ್ಯಾಪಾರಾವಕಾಶಗಳು ಸೃಷ್ಟಿಯಾಗಲಿವೆ. ಇದರಿಂದ ಉಡುಪಿ ನಗರದ ಸೌಂದರ್ಯ ಹಾಗೂ ಪ್ರವಾಸೋದ್ಯಮದ ಗುಣಮಟ್ಟವೂ ಮತ್ತಷ್ಟು ಹೆಚ್ಚಾಗಲಿದೆ.

ಈ ಹಿನ್ನೆಲೆಯಲ್ಲಿ, ಕರಾವಳಿಯ ವಿಶಿಷ್ಟ ಆಹಾರ ಸಂಸ್ಕೃತಿ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವ ಸುಸಜ್ಜಿತ ಉಡುಪಿ ಹೆರಿಟೇಜ್ ಫುಡ್ ಸ್ಟ್ರೀಟ್ ಸ್ಥಾಪಿಸುವ ಯೋಜನೆಯನ್ನು ಆದ್ಯತೆಯಿಂದ ಪರಿಗಣಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಜಯ೦ಟ್ಸ್ ಬ್ರಹ್ಮಾವರ ವತಿಯಿಂದ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಜಯಂಟ್ಸ್ ಬ್ರಹ್ಮಾವರದ ಅಧ್ಯಕ್ಷ ಅಣ್ಣಯ್ಯ ದಾಸ್, ಸಲಹೆಗಾರ ಮಧುಸೂದನ ಹೇರೂರು, ನಿತ್ಯಾನಂದ ಬಿ.ಆರ್. ಹಾಗೂ ಕಾರ್ಯಕಾರಿ ನಿರ್ವಾಹಕ ಮಿಲ್ಟನ್ ಒಲಿವೆರಾ ಉಪಸ್ಥಿತರಿದ್ದರು.