ಡಾ. ಎಂ.ಮೋಹನ ಆಳ್ವರಿಂದ ಉದ್ಘಾಟನೆ – ಸಮಾರೋಪದಲ್ಲಿ ಒಡಿಯೂರು ಶ್ರೀ ಆಶೀರ್ವಚನ
ಮುಂಬಯಿ : ಕಳೆದ ಎರಡೂವರೆ ದಶಕಗಳಿಂದ ಮುಂಬಯಿ ಮಹಾನಗರದ ವಿವಿಧ ಭಾಗಗಳಲ್ಲಿ ಯಕ್ಷಗಾನ ಶಿಕ್ಷಣ, ಬಯಲಾಟ, ಸರಣಿ ತಾಳಮದ್ದಳೆ, ಗ್ರಂಥ ಪ್ರಕಟಣೆ, ಕಲಾವಿದರ ಸಮ್ಮಾನ – ಪ್ರಶಸ್ತಿ ಪ್ರದಾನ ಮುಂತಾದ ಮಹತ್ವದ ಕಾರ್ಯ ಚಟುವಟಿಕೆಗಳ ಮೂಲಕ ಮನೆ ಮಾತಾಗಿರುವ ಅಜೆಕಾರು ಕಲಾಭಿಮಾನಿ ಬಳಗಕ್ಕೆ ಇದೀಗ ಬೆಳ್ಳಿ ಹಬ್ಬದ ಸಂಭ್ರಮ. ಅದಕ್ಕಾಗಿ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ನೇತೃತ್ವದಲ್ಲಿ ರಜತ ಪರ್ವದ ವಿಶೇಷ ಕಾರ್ಯಕ್ರಮವಾಗಿ ‘ಮುಂಬಯಿ ಯಕ್ಷಗಾನ ಸಮ್ಮೇಳನ – 2026’ ಆಯೋಜಿಸುವ ಬಗ್ಗೆ ಸರ್ವ ಸಿದ್ಧತೆಗಳು ನಡೆದಿವೆ. ಈ ನಿಟ್ಟಿನಲ್ಲಿ ಮಹಾದಾನಿ ಡಾ. ಕನ್ಯಾನ ಸದಾಶಿವ ಶೆಟ್ಟಿಯವರು ಗೌರವಾಧ್ಯಕ್ಷರಾಗಿದ್ದು , ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಅವರು ಅಧ್ಯಕ್ಷರಾಗಿರುವ ಸಮ್ಮೇಳನದ ಸ್ವಾಗತ ಸಮಿತಿ ರಚನೆಗೊಂಡು ಈಗಾಗಲೇ ಕಾರ್ಯಪ್ರವೃತ್ತವಾಗಿದೆ.

ಉದ್ಘಾಟನೆಗೆ ಡಾ.ಮೋಹನ ಆಳ್ವ :
ಮುಂಬೈ ಕುರ್ಲಾದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಬಂಟರ ಭವನದಲ್ಲಿ ನಿರ್ಮಿಸಲಾಗುವ ದಿ|ಕಲ್ಲಾಡಿ ವಿಠಲ ಶೆಟ್ಟಿ ಯಕ್ಷಗಾನ ಅಂಗಣದಲ್ಲಿ 2026 ಅಕ್ಟೋಬರ್ 3 ಮತ್ತು 4ರಂದು ಎರಡು ದಿನ ನಡೆಯುವ ಮುಂಬಯಿ ಯಕ್ಷಗಾನ ಸಮ್ಮೇಳನಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಮತ್ತು ಯಕ್ಷಗಾನದ ಮಹಾಪೋಷಕ ಡಾ. ಕೆ. ಶ್ಯಾಮ ಭಟ್ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮೊದಲ ದಿನ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ, ಮೂಡಬಿದರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅವರು ಎರಡು ದಿನಗಳ ಸಮ್ಮೇಳನವನ್ನು ಉದ್ಘಾಟನೆ ಮಾಡಲಿರುವರು.
ಸಮ್ಮೇಳನ ಸಮಿತಿಯ ಕಾರ್ಯಾಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಇತ್ತೀಚೆಗೆ ಡಾ.ಮೋಹನ ಆಳ್ವರನ್ನು ಮೂಡಬಿದ್ರೆಯ ಅವರ ಕಚೇರಿಯಲ್ಲಿ ಭೇಟಿಯಾಗಿ ವಿಧ್ಯುಕ್ತ ಆಹ್ವಾನ ನೀಡಿದರು. ಆಹ್ವಾನ ಸ್ವೀಕರಿಸಿ ಮಾತನಾಡಿದ ಡಾ. ಆಳ್ವರು ‘ಮುಂಬೈ ಮಹಾನಗರದ ಕಲಾಪೋಷಕರು ಮತ್ತು ಅಭಿಮಾನಿಗಳ ಪೂರ್ಣ ಸಹಕಾರದಿಂದ ಸಮ್ಮೇಳನ ಯಶಸ್ವಿಯಾಗಿ ಜರಗಲಿ’ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಮಿತಿಯ ಸದಸ್ಯ ಹಾಗೂ ಕಾರ್ಕಳದ ಉದ್ಯಮಿ ಅಜೆಕಾರು ವಿಜಯ ಶೆಟ್ಟಿ ಉಪಸ್ಥಿತರಿದ್ದರು.
ಸಮಾರೋಪಕ್ಕೆ ಒಡಿಯೂರು ಶ್ರೀ:
ಅಕ್ಟೋಬರ 4ರಂದು ಆದಿತ್ಯವಾರ ನಡೆಯುವ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ದಕ್ಷಿಣದ ಗಾಣಗಾಪುರ ಎಂದೇ ಪ್ರಸಿದ್ಧಿ ಪಡೆದ ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನಂ ಪೀಠಾಧಿಪತಿಗಳಾದ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಭಾಗವಹಿಸಿ ಆಶೀರ್ವಚನ ನೀಡಲಿರುವರು. ಈ ಬಗ್ಗೆ ಸಮ್ಮೇಳನ ಸಮಿತಿಯ ಪ್ರಧಾನ ಸಲಹೆಗಾರರಾದ ಡಾ. ಎಂ.ಪ್ರಭಾಕರ ಜೋಶಿ, ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ, ಪ್ರಧಾನ ಸಂಚಾಲಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ , ಸಹ ಸಂಚಾಲಕ ದೀವಿತ್ ಕೆ. ಪೆರಾಡಿ ಮತ್ತು ಸದಸ್ಯರಾದ ಕೆ.ಲಕ್ಷ್ಮೀ ನಾರಾಯಣ ರೈ ಹರೇಕಳ ಅವರನ್ನೊಳಗೊಂಡ ನಿಯೋಗವು ಶ್ರೀ ಸಂಸ್ಥಾನಕ್ಕೆ ಭೇಟಿ ನೀಡಿ ಸ್ವಾಮೀಜಿಯವರನ್ನು ಮುಂಬೈಗೆ ಆಹ್ವಾನಿಸಿದರು.
ಈ ವೇಳೆ ಕಾರ್ಯಕ್ರಮಕ್ಕೆ ಶುಭಕೋರಿದ ಒಡಿಯೂರು ಶ್ರೀಗಳು ‘ಯಕ್ಷಗಾನ, ನಾಟಕ ಸೇರಿದಂತೆ ಕರಾವಳಿ ಜಿಲ್ಲೆಗಳ ಕಲೆ – ಸಾಹಿತ್ಯ- ಸಂಸ್ಕೃತಿಗಳಿಗೆ ರಾಜಾಶ್ರಯ ನೀಡುತ್ತಿರುವ ಮುಂಬೈಯಲ್ಲಿ ಬಹಳ ದಿನಗಳ ಬಳಿಕ ಯಕ್ಷಗಾನ ಸಮ್ಮೇಳನ ಜರುಗುತ್ತಿರುವುದು ಅಭಿನಂದನೀಯ. ಯಕ್ಷಗಾನ ರಂಗದ ಸಾಧಕ ಕಲಾವಿದರು, ವಿದ್ವಾಂಸರು ಮತ್ತು ಸಂಘಟಕರು ಮೌಲ್ಯಯುತವಾದ ಚಿಂತನ – ಮಂಥನ, ಪ್ರದರ್ಶನಗಳ ಮೂಲಕ ಸಮ್ಮೇಳನವನ್ನು ಅರ್ಥಪೂರ್ಣವಾಗಿ ನಡೆಸಲಿ’ ಎಂದು ಫಲಮಂತ್ರಾಕ್ಷತೆ ನೀಡಿ ಹರಸಿದರು.
‘ಯಕ್ಷಗಾನ ಮುಂಬೆಳಗು’ ಸ್ಮೃತಿ ಸಂಪುಟ:
ಮುಂಬಯಿ ಯಕ್ಷಗಾನ ಸಮ್ಮೇಳನದಲ್ಲಿ ನಾಡಿನ ಶ್ರೇಷ್ಠ ವಿದ್ವಾಂಸರು ಮತ್ತು ಲೇಖಕರ ಬರಹಗಳನ್ನೊಳಗೊಂಡ ‘ಯಕ್ಷಗಾನ ಮುಂಬೆಳಗು’ ಎಂಬ ಸ್ಮೃತಿ ಸಂಪುಟವು ಬಿಡುಗಡೆಗೊಳ್ಳಲಿದ್ದು ಈಗಾಗಲೇ ಅದರ ಮುದ್ರಣ ಕಾರ್ಯ ನಡೆಯುತ್ತಿರುವುದಾಗಿ ಸಂಪುಟದ ಪ್ರಧಾನ ಸಂಪಾದಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದ್ದಾರೆ. ಸಮ್ಮೇಳನದಲ್ಲಿ ಸುಮಾರು ಎಂಟಕ್ಕೂ ಮಿಕ್ಕಿದ ಗೋಷ್ಠಿಗಳಿದ್ದು ಯಕ್ಷಗಾನ ತಾಳಮದ್ದಳೆ, ಬಯಲಾಟ, ಹಾಸ್ಯರಂಜನೆ, ಕಲಾವಿದರು – ಕಲಾಪೋಷಕರಿಗೆ ಸಮ್ಮಾನ, ಪ್ರಶಸ್ತಿ ಪ್ರದಾನ,ಯಕ್ಷ ಚಿತ್ರ ಸಂಗ್ರಹ ಮತ್ತು ಪುಸ್ತಕ ಪ್ರದರ್ಶನಗಳು ನಡೆಯಲಿದ್ದು ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅಜೆಕಾರು ಕಲಾಭಿಮಾನಿ ಬಳಗದ ಪ್ರಕಟಣೆ ತಿಳಿಸಿದೆ.

