ಉಡುಪಿ: ಸಣ್ಣ, ಸೂಕ್ಷ$್ಮ ಹಾಗೂ ಮಧ್ಯಮ ಕೈಗಾರಿಕೆಗಳು ಪರಿಸರ ಸ್ನೇಹಿ ಉತ್ಪನ್ನಗಳ ತಯಾರಿಕೆಗೆ ಹೆಚ್ಚು ಒತ್ತು ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತಿಕ್ ಬಾಯಲ್ ಕರೆ ನೀಡಿದರು.
ಬುಧವಾರ ಕಡಿಯಾಳಿಯಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಎಂ.ಎಸ್.ಎಂ.ಇ ನಿರ್ದೇಶನಾಲಯ, ಜಿಲ್ಲಾ ಕೈಗಾರಿಕಾ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಎಂ.ಎಸ್.ಎಂ.ಇ. ಕಾರ್ಯಕ್ಷಮತೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ದೇಶಕ್ಕೆ ಯೂರೋಪಿಯನ್ನರು ವ್ಯಾಪಾರವನ್ನು ಅರಿಸಿ, ಬರುವುದಕ್ಕೂ ಮುನ್ನ ಸಣ್ಣ ಹಾಗೂ ಗುಡಿ ಕೈಗಾರಿಕೆಗಳು ಹೆಚ್ಚಿದ್ದವು. ಕರಕುಶಲ ವಸ್ತುಗಳು, ಆಹಾರ ಪದಾರ್ಥಗಳು ಸೇರಿದಂತೆ ಮತ್ತಿತರ ಉತ್ಪನ್ನಗಳು ವಿಶ್ವದಲ್ಲಿಯೇ ಹೆಚ್ಚಿನ ಬೇಡಿಕೆ ಹೊಂದಿದ್ದವು. ಸಾಂಪ್ರದಾಯಿಕ ಉತ್ಪನ್ನಗಳ ತಯಾರಿಕೆ ಬಹುತೇಕ ಕುಂಠಿತಗೊಂಡು ಸಾಂಪ್ರದಾಯಿಕ ಕುಶಲಕರ್ಮಿಗಳು ಕೃಷಿಯತ್ತ ಸಾಗಿದರು ಎಂದರು.
ಬೆಂಗಳೂರು ಟೆಕ್ಸಾಕ್ ಸಿ.ಇ.ಓ ಸಿದ್ಧರಾಜು ಪ್ರಾಸ್ತಾವಿಕವಾಗಿ ಮಾತನಾಡಿ, ಕೊರೋನಾ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಸ್ಥಿರವಾಗಿ ನಿಲ್ಲಲು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದ ಸಣ್ಣ ಕೈಗಾರಿಕೆಗಳಿಗೆ ರ್ಯಾಂಪ್ ಯೋಜನೆಯನ್ನು ಜಾರಿ ಮಾಡುವ ಮೂಲಕ ಕೇಂದ್ರ, ರಾಜ್ಯ ಸರ್ಕಾರಗಳ ಜೊತೆಗೆ ವಿಶ್ವ ಬ್ಯಾಂಕ್ಗಳು ಆರ್ಥಿಕ ಬಲ ನೀಡಿದವು. ಯಾವುದೇ ಉತ್ಪನ್ನಗಳ ಗುಣಮಟ್ಟ ಉತ್ತಮವಾಗಿವೆ ಎಂದು ತಿಳಿಸಲು ಪ್ರಮಾಣಪತ್ರ ಅಗತ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಉತ್ಪನ್ನಗಳನ್ನು ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಉತ್ಪಾದಿಸಲು ಝಡ್.ಇ.ಡಿ ಪ್ರಮಾಣಪತ್ರಗಳು ಪ್ರಮುಖಪಾತ್ರ ವಹಿಸಲಿವೆ. ಸಣ್ಣ ಕೈಗಾರಿಕೋದ್ಯಮಗಳಿಗೆ ಗುಣಮಟ್ಟ, ಉತ್ಪಾದಕತೆ ಹಾಗೂ ಕಾರ್ಯಕ್ಷಮತೆಯನ್ನು ಸುಧಾರಿಸಲು ಲೀನ್ ಮಾಹಿತಿ ಕಾರ್ಯಕ್ರಮ ಪ್ರಯೋಜನಕಾರಿಯಾಗಲಿದೆ ಎಂದರು.
ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ವಿ. ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಂ.ಎಸ್.ಎಂ.ಇ. ಅಧಿಕಾರಿ ಗೋಪಿನಾಥ್ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಝೆಡ್.ಇ.ಡಿ ಯೋಜನೆಯಡಿ ಅರ್ಹ ಉದ್ಯಮಿಗಳಿಗೆ ಸಿಲ್ವರ್ ಸರ್ಟಿಫಿಕೇಟ್ ವಿತರಿಸಲಾಯಿತು. ಎಂ.ಎಸ್.ಎಂ.ಇ ಜಂಟಿ ನಿರ್ದೇಶಕ ಸುಂದರ್ ಶೇರಿಗಾರ್, ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ವಸಂತ ಕಿಣಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಮತ್ತಿತರರು ಉಪಸ್ಥಿತರಿದ್ದರು.
ಟೆಕ್ಸಾಕ್ ಅಸೋಸಿಯೇಟ್ ಕನ್ಸಲ್ಟೆಂಟ್ ಅರವಿಂದ್ ಡಿ ಬಾಳೇರಿ ಸ್ವಾಗತಿಸಿ, ಶ್ರುತಿ ನಿರೂಪಿಸಿ, ಕೈಗಾರಿಕೆ ಇಲಾಖೆಯ ಉಪನಿರ್ದೇಶಕ ಸೀತಾರಾಮ ಶೆಟ್ಟಿ ವಂದಿಸಿದರು.

