ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಉಪ್ಪೂರು ಗ್ರಾಮದಲ್ಲಿರುವ ನಂದಿನಿ ಡೇರಿ (ಕೆಎಂಎಫ್)ಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿದ್ದ ಬಿರುಕು ಹಾಗೂ ಹದಗೆಟ್ಟ ಭಾಗವನ್ನು ಇದೀಗ ಶಾಶ್ವತವಾಗಿ ದುರಸ್ತಿ ಮಾಡಲಾಗಿದೆ.
ರಸ್ತೆಯ ಮಧ್ಯಭಾಗದಲ್ಲಿ ದೊಡ್ಡ ಪ್ರಮಾಣದ ಬಿರುಕು ಕಾಣಿಸಿಕೊಂಡಿದ್ದರಿಂದ ನಂದಿನಿ ಡೇರಿಗೆ ಸಂಚರಿಸುವ ಘನ ವಾಹನಗಳು, ಸಿಬ್ಬಂದಿಯ ವಾಹನಗಳು ಹಾಗೂ ಸ್ಥಳೀಯ ಸಾರ್ವಜನಿಕರು ಆತಂಕದಿಂದ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ರಸ್ತೆಯ ಸ್ಥಿತಿ ಕುರಿತು ಸಾಮಾಜಿಕ ಹೋರಾಟಗಾರ ಹಾಗೂ ಸಮಾಜ ಸೇವಕ ಸತೀಶ್ ಪೂಜಾರಿ ಕೀಳಂಜೆ ಅವರು ನಿರಂತರವಾಗಿ ಧ್ವನಿ ಎತ್ತಿ, ಕೆಎಂಎಫ್ ಅಧ್ಯಕ್ಷರು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.
ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳ ಮೂಲಕವೂ ರಸ್ತೆಯ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದ ಅವರು, ದೂರವಾಣಿ ಮೂಲಕವೂ ರಸ್ತೆಯ ಗಂಭೀರ ಸ್ಥಿತಿಯನ್ನು ವಿವರಿಸಿ ಶೀಘ್ರ ದುರಸ್ತಿ ಮಾಡುವಂತೆ ಮನವಿ ಮಾಡಿದ್ದರು.
ಮನವಿಗೆ ಸ್ಪಂದಿಸಿದ ಕೆಎಂಎಫ್ ಅಧ್ಯಕ್ಷರು ಹಾಗೂ ಅಧಿಕಾರಿಗಳು ಇದೀಗ ರಸ್ತೆಯ ಬಿರುಕು ಬಿಟ್ಟ ಭಾಗಕ್ಕೆ ಸಿಮೆಂಟ್, ಜಲ್ಲಿಕಲ್ಲು ಮಿಶ್ರಿತ ಕಾಂಕ್ರೀಟ್ ಹಾಕಿ ಶಾಶ್ವತವಾಗಿ ದುರಸ್ತಿ ಕಾಮಗಾರಿ ಕೈಗೊಂಡಿದ್ದಾರೆ. ಇದರಿಂದ ನಂದಿನಿ ಡೇರಿಗೆ ತೆರಳುವ ನೌಕರರು, ಘನ ವಾಹನಗಳ ಚಾಲಕರು ಹಾಗೂ ಸುತ್ತಮುತ್ತಲಿನ ವಸತಿ ಪ್ರದೇಶದ ನಿವಾಸಿಗಳಿಗೆ ಅನುಕೂಲವಾಗಿದೆ.
ಬಹುಕಾಲದಿಂದ ಇದ್ದ ಸಮಸ್ಯೆ ಪತ್ರಿಕಾ ಹಾಗೂ ದೃಶ್ಯ ಮಾಧ್ಯಮಗಳ ಮೂಲಕ ಗಮನ ಸೆಳೆದ ಬಳಿಕ ಕೇವಲ ಒಂದು ತಿಂಗಳ ಅವಧಿಯಲ್ಲಿ ಬಗೆಹರಿದಿರುವುದಕ್ಕೆ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ. ಇದೀಗ ಯಾವುದೇ ಆತಂಕವಿಲ್ಲದೆ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಸಮಾಜಮುಖಿ ಕಾಳಜಿಯಿಂದ ಯಾವುದೇ ಫಲಾಪೇಕ್ಷೆಯಿಲ್ಲದೆ ಸಮಸ್ಯೆಗಳಿಗೆ ಸ್ಪಂದಿಸಿ ಹೋರಾಟ ನಡೆಸುತ್ತಿರುವ ಸತೀಶ್ ಪೂಜಾರಿ ಕೀಳಂಜೆ ಅವರ ಕಾರ್ಯವನ್ನು ಸ್ಥಳೀಯರು ಶ್ಲಾಘಿಸಿದ್ದಾರೆ. ರಸ್ತೆ ದುರಸ್ತಿಗೆ ಸ್ಪಂದಿಸಿದ ಕೆಎಂಎಫ್ ಅಧ್ಯಕ್ಷರು, ಅಧಿಕಾರಿಗಳು ಹಾಗೂ ಸಮಸ್ಯೆಯನ್ನು ಸಾರ್ವಜನಿಕರ ಗಮನಕ್ಕೆ ತಂದ ಮಾಧ್ಯಮದವರಿಗೂ ಸಾರ್ವಜನಿಕರು ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ವಸತಿ ಪ್ರದೇಶದ ನಿವಾಸಿಗಳ ಪರವಾಗಿ ಉದ್ಯಮಿ ರೋಶನ್ ಡಿಸೋಜ ಅವರು ಸತೀಶ್ ಪೂಜಾರಿ ಕೀಳಂಜೆ ಹಾಗೂ ಅವರ ಕುಟುಂಬಕ್ಕೆ ಉತ್ತಮ ಆರೋಗ್ಯ ಮತ್ತು ಸುಖ–ಸಮೃದ್ಧಿ ದೊರೆಯಲಿ ಎಂದು ಹಾರೈಸಿದ್ದಾರೆ.

