
ಮಣಿಪಾಲ : ನಗರದ ಹೊರವಲಯದ ಕೈಗಾರಿಕಾ ಪ್ರದೇಶವನ್ನು ಸಂಪರ್ಕಿಸುವ ಮುಖ್ಯ ರಸ್ತೆಯ ಸಾರ್ವಜನಿಕ ಸ್ಥಳವೊಂದರಲ್ಲಿ ಅಸ್ವಸ್ಥಗೊಂಡು, ಅಸಹಾಯಕ ಸ್ಥಿತಿಯಲ್ಲಿದ್ದ ನಿರ್ಗತಿಕ ವ್ಯಕ್ತಿಯೊಬ್ಬರನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು ರವಿವಾರ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ದಾಖಲಾತಿ ಪ್ರಕ್ರಿಯೆ ವೇಳೆ ತನ್ನ ಹೆಸರು ತಿಮ್ಮ ಬೇಚಾ (40) ಎಂದು ತಿಳಿಸಿರುವ ಅವರು, ತನಗೆ ಯಾರೂ ದಿಕ್ಕಿಲ್ಲದ ನಿರ್ಗತಿಕನೆಂದು ಹೇಳಿಕೊಂಡಿದ್ದಾರೆ. ರೋಗಿಯ ದೇಹ ಊದಿಕೊಂಡಿದ್ದು, ಗಂಭೀರ ಸ್ವರೂಪದ ಕಾಯಿಲೆಯಿಂದ ಬಳಲುತ್ತಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಸಂಬಂಧಿಕರು ಇದ್ದಲ್ಲಿ ಉಡುಪಿ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.

