ಬ್ಯಾಟ್‌ನಿಂದ ತಂದೆಯನ್ನು ಕೊಂದ ಪುತ್ರ; 18 ಸುತ್ತು ಗುಂಡು ಹಾರಿಸಿದ ಪೊಲೀಸ್

0
17

ಅಮೆರಿಕ : ಅಮೆರಿಕದ ಕನೆಕ್ಟಿಕಟ್ ರಾಜ್ಯದಲ್ಲಿ ಪುತ್ರನೊಬ್ಬ ತನ್ನ ತಂದೆಯನ್ನು ಮನೆಯ ಎದುರೇ ಬೇಸ್‌ಬಾಲ್ ಬ್ಯಾಟ್‌ನಿಂದ ಬಡಿದು ಹತ್ಯೆಗೈದ ಘಟನೆ ನಡೆದಿದ್ದು, ದಾಳಿ ನಿಲ್ಲಿಸುವಂತೆ ಹಲವು ಬಾರಿ ಎಚ್ಚರಿಕೆ ನೀಡಿದರೂ ಪಾಲಿಸದ ಹಿನ್ನೆಲೆಯಲ್ಲಿ ಪೊಲೀಸರು ಗುಂಡು ಹಾರಿಸಿ ಆರೋಪಿಯನ್ನು ಹತ್ಯೆಗೈದಿದ್ದಾರೆ.

ಮೃತ ಆರೋಪಿಯನ್ನು 38 ವರ್ಷದ ಮೂರನೇ ರಾಬರ್ಟ್ ಜೆನ್ಕಿನ್ಸ್ ಹಾಗೂ ಮೃತ ತಂದೆಯನ್ನು 69 ವರ್ಷದ ರಾಬರ್ಟ್ ಜೆನ್ಕಿನ್ಸ್ ಜೂನಿಯರ್ ಎಂದು ಗುರುತಿಸಲಾಗಿದೆ.

ಸಶಸ್ತ್ರ ಕೌಟುಂಬಿಕ ಹಿಂಸಾಚಾರ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಪೊಲೀಸ್ ಅಧಿಕಾರಿ ಆಯಂಥೋನಿ ಅಫಿಯಲಿ ಸ್ಥಳಕ್ಕೆ ಧಾವಿಸಿದಾಗ, ಆರೋಪಿ ತನ್ನ ತಂದೆಯ ಮೇಲೆ ಬೇಸ್‌ಬಾಲ್ ಬ್ಯಾಟ್‌ನಿಂದ ಮಾರಣಾಂತಿಕ ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ. ಆಗ ಗಾಯಗೊಂಡಿದ್ದ ತಂದೆ ಮನೆಯ ಮುಂಭಾಗದ ಹುಲ್ಲುಹಾಸಿನ ಮೇಲೆ ನಿಶ್ಚಲನಾಗಿ ಬಿದ್ದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗೆ ಬ್ಯಾಟ್ ಕೆಳಗಿಟ್ಟು ದಾಳಿ ನಿಲ್ಲಿಸುವಂತೆ ಅಧಿಕಾರಿ ನಾಲ್ಕು ಬಾರಿ ಎಚ್ಚರಿಕೆ ನೀಡಿದರೂ ಆತ ಹಲ್ಲೆ ಮುಂದುವರಿಸಿದ್ದಾನೆ. ಇದರಿಂದಾಗಿ ಅಧಿಕಾರಿ ಆರೋಪಿಯ ಮೇಲೆ ಹಲವು ಸುತ್ತು ಗುಂಡು ಹಾರಿಸಿದ್ದು, ಗುಂಡೇಟಿಗೆ ಒಳಗಾದ ಆರೋಪಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ವರದಿಗಳ ಪ್ರಕಾರ, ಅಧಿಕಾರಿ ಸುಮಾರು 18 ಸುತ್ತು ಗುಂಡು ಹಾರಿಸಿರುವುದು ಬಾಡಿ ಕ್ಯಾಮೆರಾ ದೃಶ್ಯಗಳಲ್ಲಿ ದಾಖಲಾಗಿದೆ.

ಬಳಿಕ ತಂದೆ ಹಾಗೂ ಪುತ್ರ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ.

ಈ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿ ಪ್ರಮಾಣಿತ ಕಾರ್ಯವಿಧಾನ ಅನುಸರಿಸಿದ್ದಾರೆಯೇ ಹಾಗೂ ಮಾರಣಾಂತಿಕ ಬಲ ಬಳಸುವುದು ಅಗತ್ಯವಿತ್ತೇ ಎಂಬ ಕುರಿತು ಕನೆಕ್ಟಿಕಟ್ ಪೊಲೀಸ್ ಮಹಾ ನಿರ್ದೇಶಕರ ಕಚೇರಿ ತನಿಖೆ ಆರಂಭಿಸಿದೆ.