ಕಾಣಿಯೂರು : ಶ್ರೀ ಜಗದ್ಗುರು ಶ್ರೀ ಮನ್ಯದ್ದಾಚಾರ್ಯ ಮೂಲ ಮಹಾಸಂಸ್ಥಾನಂ ಕಾಣಿಯೂರು ಮಠದಲ್ಲಿ ಜುಲೈ 8 ಹಾಗೂ 9ರಂದು ವಿಶೇಷ ದೋಷ ನಿವೃತಿ ಪೂಜಾ–ಹೋಮ ಕಾರ್ಯಕ್ರಮಗಳು ನಡೆಯಲಿವೆ.
ಉಡುಪಿ ಕಾಣಿಯೂರು ಮಠದ ಶ್ರೀ ಶ್ರೀ ಶ್ರೀ ವಿಧ್ಯಾವಲ್ಲಭ ತೀರ್ಥ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ, ಶ್ರೀ ವಿಶ್ವಮೂರ್ತಿ ಬಡೆಕ್ಕಿಲ್ಲಾಯರು ನಡೆಸಿದ ಪ್ರಶ್ನೆ ಚಿಂತನೆಯ ಅನುಸಾರ ದೋಷ ನಿವೃತಿ ಪೂಜೆ ಹಾಗೂ ಹೋಮ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಜುಲೈ 8ರಂದು (ಬುಧವಾರ) ಬೆಳಿಗ್ಗೆಯಿಂದ ಆರಂಭವಾಗುವ ಧಾರ್ಮಿಕ ಕಾರ್ಯಕ್ರಮಗಳು ಜುಲೈ 9ರಂದು (ಗುರುವಾರ) ಮಧ್ಯಾಹ್ನದವರೆಗೆ ನಡೆಯಲಿವೆ. ಈ ಸಂದರ್ಭದಲ್ಲಿ ವಿಶೇಷ ಪೂಜೆ, ಹೋಮ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ.
ಕಾಣಿಯೂರು ಮಠದ ವ್ಯವಸ್ಥಾಪಕರಾದ ಶ್ರೀನಿಧಿ ಆಚಾರ್ಯ ಅವರು ಪ್ರಕಟಣೆ ನೀಡಿ, ಕೂಡುಕಟ್ಟಿನ ಭಕ್ತರು ಹಾಗೂ ಸಾರ್ವಜನಿಕ ಭಕ್ತಾದಿಗಳು ತನು–ಮನ–ಧನಗಳಿಂದ ಕಾರ್ಯಕ್ರಮಕ್ಕೆ ಸಹಕರಿಸಿ, ಶ್ರೀ ದೇವರ ಹಾಗೂ ದೈವದ ಪ್ರಸಾದ ಸ್ವೀಕರಿಸಿ ಅನುಗ್ರಹಕ್ಕೆ ಪಾತ್ರರಾಗುವಂತೆ ಮನವಿ ಮಾಡಿದ್ದಾರೆ.
ಕಾರ್ಯಕ್ರಮದ ಯಶಸ್ಸಿಗಾಗಿ ಕೂಡುಕಟ್ಟಿನ ಪ್ರತಿ ಕುಟುಂಬವು ಕನಿಷ್ಠ ₹2,000 ವಂತಿಗೆ ನೀಡುವಂತೆ ಕೋರಲಾಗಿದೆ. ಅಲ್ಲದೆ ಅಕ್ಕಿ, ತೆಂಗಿನಕಾಯಿ, ಬೆಲ್ಲ, ಎಣ್ಣೆ, ಸಕ್ಕರೆ, ಬೇಳೆ, ಹೂವು ಹಾಗೂ ತುಳಸಿ ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳನ್ನು ಭಕ್ತರಿಂದ ಸ್ವೀಕರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
