ಮಂಗಳೂರು : ಕುಲಶೇಖರದ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸೆಪ್ಟೆಂಬರ್ 4ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ 1.30ರಿಂದ ಶ್ರೀ ದೇವಿ ಭಕ್ತ ವೃಂದ ಬೊಂದೇಲ್ ಇವರಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಮಧ್ಯಾಹ್ನ 2.45ಕ್ಕೆ ಸಾಮೂಹಿಕ ಪ್ರಾರ್ಥನೆ ಹಾಗೂ ದೀಪ ಪ್ರಜ್ವಲನೆ ಕಾರ್ಯಕ್ರಮ ನಡೆಯಲಿದ್ದು, ಉದ್ಯಮಿಗಳಾದ ಸುನೀತಾ ಪದ್ಮನಾಭ ಹಾಗೂ ಶ್ರೀ ಪದ್ಮನಾಭ ಕರ್ಕೇರ ದೀಪ ಪ್ರಜ್ವಲನೆ ನೆರವೇರಿಸಲಿದ್ದಾರೆ.
ಮಧ್ಯಾಹ್ನ 3.05ರಿಂದ ಮಕ್ಕಳಿಗಾಗಿ ವಿವಿಧ ವಿಭಾಗಗಳಲ್ಲಿ ಮುದ್ದುಕೃಷ್ಣ ಸ್ಪರ್ಧೆ ನಡೆಯಲಿದೆ. 2 ವರ್ಷದೊಳಗಿನ ಪುಟಾಣಿಗಳಿಗೆ ‘ಕಂದ ಕೃಷ್ಣ’, 2ರಿಂದ 4 ವರ್ಷದೊಳಗಿನವರಿಗೆ ‘ಮುದ್ದು ಕೃಷ್ಣ’, 4ರಿಂದ 6 ವರ್ಷದೊಳಗಿನವರಿಗೆ ‘ಬಾಲಕೃಷ್ಣ’ ಹಾಗೂ 6ರಿಂದ 8 ವರ್ಷದೊಳಗಿನ ಮಕ್ಕಳಿಗೆ ‘ಕಿಶೋರಕೃಷ್ಣ’ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.
ಮಧ್ಯಾಹ್ನ 3.30ಕ್ಕೆ ಮಹಿಳೆಯರಿಗಾಗಿ ದೇವಳದ ಪೌಳಿಯಲ್ಲಿ ಮಡಕೆ ಕಟ್ಟುವ ಸ್ಪರ್ಧೆ ಆಯೋಜಿಸಲಾಗಿದೆ. ಬಳಿಕ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ.
ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ವೀರನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೆ. ಸುಂದರ್ ಕುಲಾಲ್ ವಹಿಸಲಿದ್ದಾರೆ. ಸರಕಾರಿ ಪದವಿ ಪೂರ್ವ ಕಾಲೇಜು, ಸಚಿಪು, ಮೂಡ ಇದರ ನಿವೃತ್ತ ಪ್ರಾಂಶುಪಾಲರಾದ ಕೆ. ರವೀಂದ್ರ, ಶಾರದಾ ಗಣಪತಿ ವಿದ್ಯಾ ಮಂದಿರ, ಪುಣ್ಯಕೋಟಿ, ಕೈರಂಗಳದ ಸಂಚಾಲಕರಾದ ಟಿ.ಜಿ. ರಾಜಾರಾಮ್ ಭಟ್, MRPL ಮಂಗಳೂರಿನ ನಿವೃತ್ತ ಚೀಫ್ ಮ್ಯಾನೇಜರ್ ಗಣೇಶ್ ಎಂ., ಶಕ್ತಿ ಲೈಫ್ ಲೈನ್ ಮಂಗಳೂರಿನ ಮಾಲಕರಾದ ಎಂ. ಶ್ರೀನಿವಾಸ್ ಭಟ್, ಕೊಲ್ಯ ಕುಲಾಲ ಸಂಘ ಮಹಿಳಾ ಘಟಕದ ಅಧ್ಯಕ್ಷರಾದ ಹರಿಣಾಕ್ಷಿ ವಿ. ಕುಲಾಲ್ ಹಾಗೂ KIOCL ಮಂಗಳೂರಿನ ನಿವೃತ್ತ ಉದ್ಯೋಗಿ ಲೋಕೇಶ್ ಕುಲಾಲ್ ಎಕ್ಕೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ರಾತ್ರಿ 8.30ರಿಂದ ಸವಿಜೀವನಂ ನೃತ್ಯ ಕಲಾ ಕ್ಷೇತ್ರ, ಕೊಂಡೆವೂರು ಉಪ್ಪಳ ಇವರ ವತಿಯಿಂದ ‘ಸವಿನಾಟ್ಯ ಸಂಗಮ’ ಎಂಬ ವಿಶೇಷ ನೃತ್ಯ ಕಾರ್ಯಕ್ರಮ ನಡೆಯಲಿದೆ. ಶ್ರೀಮತಿ ಸವಿತಾ ಜೀವನ್ ಹಾಗೂ ಶಿಷ್ಯ ವೃಂದ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಿದ್ದಾರೆ.
ರಾತ್ರಿ 10.30ರಿಂದ ಶ್ರೀ ವೀರನಾರಾಯಣ ಭಕ್ತ ವೃಂದ, ಕುಲಶೇಖರ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಮಹಾಪೂಜೆ ನೆರವೇರಲಿದೆ. ರಾತ್ರಿ 12.15ಕ್ಕೆ ಶ್ರೀ ದೇವರಿಗೆ ಅರ್ಥ್ಯ ಪ್ರಧಾನ ಪೂಜೆ ನಡೆಯಲಿದೆ. ಈ ಸೇವೆಯ ಸೇವಾಕರ್ತರು ವ್ರತದಲ್ಲಿರಬೇಕೆಂದು ದೇವಸ್ಥಾನದ ವತಿಯಿಂದ ತಿಳಿಸಲಾಗಿದೆ. ರಾತ್ರಿ 12.30ಕ್ಕೆ ಭಕ್ತರಿಗೆ ಉಪಹಾರ ವ್ಯವಸ್ಥೆ ಮಾಡಲಾಗಿದೆ.
ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಡೆಯಲಿರುವ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಭಕ್ತ ವೃಂದದವರು ವಿನಂತಿಸಿದ್ದಾರೆ.

