ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನಲ್ಲಿ ಎಐ ಮತ್ತು ಕೋಡಿಂಗ್ ಬೂಟ್ ಕ್ಯಾಂಪ್ ಸಮಾರೋಪ

0
9

ಮೂಡುಬಿದಿರೆ: ಇಂದಿನ ಡಿಜಿಟಲ್ ಯುಗದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಮತ್ತು ಕೋಡಿಂಗ್ ಕೌಶಲ್ಯಗಳು ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಅತ್ಯಗತ್ಯವಾಗಿದ್ದು, ಇಂತಹ ತಂತ್ರಜ್ಞಾನಗಳ ಜ್ಞಾನವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಮುಂಡ್ಕೂರು ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿನ ಪ್ರಾಧ್ಯಾಪಕ ಪ್ರಕಾಶ್ ನಾಯ್ಕ್ ಹೇಳಿದರು.

ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜಿನಲ್ಲಿ ಅಕ್ಟೋಬರ್ 12ರಿಂದ 17ರವರೆಗೆ ಆಯೋಜಿಸಲಾಗಿದ್ದ ಒಂದು ವಾರದ ‘ಎಐ ಮತ್ತು ಕೋಡಿಂಗ್ ಬೂಟ್ ಕ್ಯಾಂಪ್’ ಹಾಗೂ ‘ಶಿಕ್ಷಕರಿಗಾಗಿ ಎಐ ಕಾರ್ಯಾಗಾರ’ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ), ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಹಾಗೂ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಅಶ್ವತ್ಥ ರಾವ್ ಮಾತನಾಡಿ, ತಂತ್ರಜ್ಞಾನವನ್ನು ಕೇವಲ ಬಳಸುವುದಷ್ಟೇ ಅಲ್ಲದೆ, ಅದರ ಹಿಂದಿರುವ ತಾರ್ಕಿಕ ಚಿಂತನೆ ಮತ್ತು ಕೋಡಿಂಗ್ ಕೌಶಲ್ಯಗಳನ್ನು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಇಂತಹ ಪ್ರಾಯೋಗಿಕ ತರಬೇತಿ ನೀಡಿರುವುದು ಶ್ಲಾಘನೀಯ ಎಂದರು.

ಶ್ರೀ ಮಹಾವೀರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಲೆಫ್ಟಿನೆಂಟ್ ವಿಜಯಲಕ್ಷ್ಮಿ ಮಾತನಾಡಿ, ಇಂತಹ ತರಬೇತಿ ಕಾರ್ಯಾಗಾರಗಳು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಪ್ರಯೋಜನಕಾರಿಯಾಗಿದ್ದು, ಭವಿಷ್ಯದ ಸ್ಪರ್ಧಾತ್ಮಕ ಜಗತ್ತನ್ನು ಎದುರಿಸಲು ಸಹಕಾರಿಯಾಗಲಿವೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಮಹಾವೀರ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಮಾತನಾಡಿ, ತಂತ್ರಜ್ಞಾನವು ವೇಗವಾಗಿ ಬೆಳೆಯುತ್ತಿರುವ ಇಂದಿನ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಾಲಾ-ಕಾಲೇಜು ಹಂತದಲ್ಲೇ ಕೃತಕ ಬುದ್ಧಿಮತ್ತೆಯಂತಹ ನೂತನ ತಂತ್ರಜ್ಞಾನಗಳ ಕುರಿತು ಅರಿವು ಬೆಳೆಸಿಕೊಳ್ಳುವುದು ಅಗತ್ಯವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಮೈಂಡ್‌ಫುಲ್ ಕನ್ಸಲ್ಟಿಂಗ್‌ನ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಭಟ್ ಅವರು ಪ್ರಾಯೋಜಿಸಿದ್ದ ವಿಶೇಷ ಬಹುಮಾನವನ್ನು ಪ್ರಣವ್ ಎಂಬ ವಿದ್ಯಾರ್ಥಿಗೆ ವಿತರಿಸಲಾಯಿತು. ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಪ್ರಮಾಣಪತ್ರಗಳನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಹರೀಶ್ ಉಪಸ್ಥಿತರಿದ್ದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥೆ ಕೀರ್ತಳ ಸ್ವಾಗತಿಸಿದರು. ಕೋಡಿಂಗ್ ಕ್ಲಬ್‌ನ ವಿದ್ಯಾರ್ಥಿ ಸಂಯೋಜಕ ನಟರಾಜ್ ಹೆಬ್ಬಾರ್ ವಂದಿಸಿದರು. ಪ್ರಥಮ ಬಿ.ಸಿ.ಎ. ವಿದ್ಯಾರ್ಥಿನಿ ಭವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.