ನರಸಿಂಹ ಮಾಣಿ ಅವರ ಮನೆಗೆ ಹಿಂಜಾವೇ ರಾಜ್ಯ ಕಾರ್ಯಕಾರಿಣಿ ಸದಸ್ಯ ಉಲ್ಲಾಸ್ ಕೆ.ಟಿ. ಭೇಟಿ

0
20

ಪೊಲೀಸ್ ಇಲಾಖೆಯ ದ್ವಂದ್ವ ನೀತಿ ಮತ್ತು ದಮನಕಾರಿ ಕ್ರಮ ನಿಲ್ಲದಿದ್ದರೆ ರಾಜ್ಯಾದ್ಯಂತ ಜನಾಂದೋಲನ: ಉಲ್ಲಾಸ್ ಕೆ.ಟಿ.

ಮಾಣಿ: ಹಿಂದೂ ಜಾಗರಣ ವೇದಿಕೆಯ ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಅವರಿಗೆ ಗಡಿಪಾರು ಆದೇಶ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಹಿಂಜಾವೇ ರಾಜ್ಯ ಕಾರ್ಯಕಾರಿಣಿ ಸದಸ್ಯ ಉಲ್ಲಾಸ್ ಕೆ.ಟಿ. ಅವರು ನರಸಿಂಹ ಮಾಣಿ ಅವರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರೊಂದಿಗೆ ಮಾತುಕತೆ ನಡೆಸಿ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಮಾತನಾಡಿದ ಉಲ್ಲಾಸ್ ಕೆ.ಟಿ. ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸ್ ಇಲಾಖೆಯ ಕೆಲವು ಅಧಿಕಾರಿಗಳು ತಮ್ಮ ಅಧಿಕಾರವನ್ನು ಸಮಾನವಾಗಿ ಬಳಸುವ ಬದಲು ಒಂದು ಧರ್ಮದವರನ್ನೇ ಗುರಿಯಾಗಿಸಿಕೊಂಡು ಗಡಿಪಾರು ಪ್ರಕರಣಗಳನ್ನು ದಾಖಲಿಸುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ತಾವು ದಕ್ಷ ಅಧಿಕಾರಿಗಳೆಂದು ಹೇಳಿಕೊಳ್ಳುವ ಪೊಲೀಸ್ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಇಂದು ಸಾರ್ವಜನಿಕರೇ ಪ್ರಶ್ನಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸ್ ಇಲಾಖೆಯ ಜವಾಬ್ದಾರಿ ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದೇ ಹೊರತು, ಯಾವುದೇ ಸಂಘಟನೆ ಅಥವಾ ನಿರ್ದಿಷ್ಟ ಸಮುದಾಯದ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ದಮನಕಾರಿ ನೀತಿಯನ್ನು ಅನುಸರಿಸುವುದಲ್ಲ. ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು. ತಪ್ಪು ಮಾಡಿದವರು ಯಾರೇ ಆಗಿದ್ದರೂ ಅವರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಲಿ. ಆದರೆ ಆಯ್ದ ವ್ಯಕ್ತಿಗಳ ವಿರುದ್ಧ ಮಾತ್ರ ಕಠಿಣ ಕ್ರಮಗಳನ್ನು ಕೈಗೊಂಡು, ಇತರರ ವಿಚಾರದಲ್ಲಿ ಮೌನ ವಹಿಸುವುದು ಪೊಲೀಸ್ ಇಲಾಖೆಯ ದ್ವಂದ್ವ ನಿಲುವನ್ನು ತೋರಿಸುತ್ತದೆ ಎಂದು ಹೇಳಿದರು.

ನರಸಿಂಹ ಮಾಣಿ ಅವರು ಸಾರ್ವಜನಿಕ ಸೇವೆ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಯಾಗಿದ್ದು, ಅವರ ವಿರುದ್ಧ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ನ್ಯಾಯಸಮ್ಮತವಾದ ಪರಿಶೀಲನೆ ನಡೆಯಬೇಕು. ಪೊಲೀಸ್ ಇಲಾಖೆಯ ಇಂತಹ ದಮನಕಾರಿ ಧೋರಣೆ ಮುಂದುವರಿಯಬಾರದು. ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಯಾವುದೇ ಒತ್ತಡ, ಪೂರ್ವಾಗ್ರಹ ಅಥವಾ ತಾರತಮ್ಯವಿಲ್ಲದೆ ನಿರ್ವಹಿಸಬೇಕು ಎಂದು ಆಗ್ರಹಿಸಿದರು.

ಪೊಲೀಸ್ ಇಲಾಖೆಯ ದ್ವಂದ್ವ ನೀತಿ ಹಾಗೂ ಆಯ್ದ ವ್ಯಕ್ತಿಗಳನ್ನು ಗುರಿಯಾಗಿಸುವ ಕ್ರಮಗಳು ಮುಂದುವರಿದರೆ ಹಿಂದೂ ಸಮಾಜ ಸುಮ್ಮನೆ ಕೂರುವುದಿಲ್ಲ. ಈ ಅನ್ಯಾಯದ ವಿರುದ್ಧ ರಾಜ್ಯದಾದ್ಯಂತ ಜನಾಂದೋಲನ ರೂಪಿಸಿ, ಪೊಲೀಸ್ ಇಲಾಖೆಗೆ ಜನಶಕ್ತಿಯ ಮೂಲಕ ಬಿಸಿ ಮುಟ್ಟಿಸುವ ಕಾರ್ಯ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ನರಸಿಂಹ ಮಾಣಿ ಅವರ ಕುಟುಂಬದ ಸದಸ್ಯರೊಂದಿಗೆ ಮಾತುಕತೆ ನಡೆಸಿ, ಅವರಿಗೆ ಧೈರ್ಯ ಹಾಗೂ ಆತ್ಮಸ್ಥೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ಪ್ರಾಂತ ಕಾರ್ಯಕಾರಿಣಿ ಸದಸ್ಯ ಪ್ರಶಾಂತ್ ಕೆಂಪುಗುಡ್ಡೆ ಹಾಗೂ ಜಿಲ್ಲಾ ಸಹ ಸಂಯೋಜಕ ಪುಷ್ಪರಾಜ್ ಕಮ್ಮಾಜೆ ಉಪಸ್ಥಿತರಿದ್ದರು.