ಬೆಂಗಳೂರು : ರಾಜ್ಯದಲ್ಲಿ ಬರ ಪರಿಸ್ಥಿತಿ, ಬೆಳೆ ನಷ್ಟ ಹಾಗೂ ಸಾಲಬಾಧೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತ ಕುಟುಂಬಗಳಿಗೆ ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ಘೋಷಣೆ ಮಾಡಿದೆ. ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರಿಗೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಸರ್ಕಾರ ಮಾಸಿಕ ₹2,000 ವಿಶೇಷ ವಿಧವಾ ವೇತನ (ಪಿಂಚಣಿ) ಯೋಜನೆಯನ್ನು ಜಾರಿಗೊಳಿಸಿದೆ.
ಕುಟುಂಬದ ಆಧಾರಸ್ತಂಭನನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ರೈತ ಮಹಿಳೆಯರಿಗೆ ನೆರವಾಗಲು ಈ ಯೋಜನೆ ಸಹಕಾರಿಯಾಗಲಿದೆ. ಸರ್ಕಾರದ ವತಿಯಿಂದ ನೇರವಾಗಿ ಮಾಸಿಕ ಪಿಂಚಣಿ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ.
ಈ ವಿಶೇಷ ಪಿಂಚಣಿ ಪಡೆಯಲು ಕೆಳಗಿನ ಮಾನದಂಡಗಳು ಕಡ್ಡಾಯ:
- ಮೃತ ರೈತರ ಆತ್ಮಹತ್ಯೆ ಪ್ರಕರಣವನ್ನು ಕೃಷಿ ಇಲಾಖೆ ಅಧಿಕೃತವಾಗಿ ಮಾನ್ಯತೆ ನೀಡಿರಬೇಕು.
- ಸರ್ಕಾರದಿಂದ ಆತ್ಮಹತ್ಯೆ ಪರಿಹಾರ ಧನ ಈಗಾಗಲೇ ಮಂಜೂರಾಗಿರಬೇಕು.
- ಮೃತ ರೈತರ ಪತ್ನಿಯರು ಮಾತ್ರ ಈ ಯೋಜನೆಗೆ ಅರ್ಹರಾಗಿರುತ್ತಾರೆ.
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಮಹಿಳೆಯರು ತಮ್ಮ ವ್ಯಾಪ್ತಿಯ ‘ಅಟಲ್ ಜೀ ಜನಸ್ನೇಹಿ ಕೇಂದ್ರ’ (ನಾಡಕಚೇರಿ) ಮೂಲಕ ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದು.
ಅಗತ್ಯ ದಾಖಲೆಗಳು
- ಕೃಷಿ ಇಲಾಖೆಯಿಂದ ನೀಡಲಾದ ಆತ್ಮಹತ್ಯೆ ಪರಿಹಾರ ಧನ ಮಂಜೂರಾತಿ ಆದೇಶದ ಪ್ರತಿ
- ನಿಗದಿತ ಅರ್ಜಿ ನಮೂನೆ
- ಆಧಾರ್ ಕಾರ್ಡ್
- ಬ್ಯಾಂಕ್ ಅಥವಾ ಅಂಚೆ ಕಚೇರಿ ಖಾತೆ ವಿವರ
- ಪಾಸ್‌ಬುಕ್ ಪ್ರತಿ ಹಾಗೂ ಇತರೆ ಅಗತ್ಯ ದಾಖಲೆಗಳು
ಸಾಲಬಾಧೆ ಮತ್ತು ಆರ್ಥಿಕ ಸಂಕಷ್ಟದಿಂದ ಕಂಗಾಲಾಗಿರುವ ರೈತ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ಸರ್ಕಾರ ಈ ಯೋಜನೆ ಜಾರಿಗೆ ತಂದಿದ್ದು, ಅರ್ಹ ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಲಾಗಿದೆ.

