ಅ. 24ರಂದು ಕಾರ್ಕಳದಲ್ಲಿ ರಾಜ್ಯಮಟ್ಟದ ವಿಶೇಷ ಶಾಲಾ ಮಕ್ಕಳ ಕ್ರೀಡಾಕೂಟ

0
11

ಉಡುಪಿ : ಕುಕ್ಕುಂದೂರಿನ ಆಯ್ಯಪ್ಪನಗರ ಶ್ರೀ ಗುರುರಾಘವೇಂದ್ರ ಸೇವಾ ಟ್ರಸ್ಟ್​ನ ವಿಜೇತ ವಸತಿಯುತ ವಿಶೇಷ ಶಾಲೆ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಹಾಗೂ ಅನುದಾನ ರಹಿತ ವಿಶೇಷ ಶಾಲೆಗಳ ಹಾಗೂ ವಿಶೇಷ ಶಿಕ್ಷಕರ ಮತ್ತು ಶಿಕ್ಷಕೇತರ ಸಿಬ್ಬಂದಿ ಒಕ್ಕೂಟದ ಆಶ್ರಯದಲ್ಲಿ ಅ. 24ರಂದು ರಾಜ್ಯಮಟ್ಟದ ಸಾಂಸತಿಕ ಸ್ಪರ್ಧೆ ಹಾಗೂ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ ಒಕ್ಕೂಟದ ಕಾರ್ಯಾಧ್ಯೆ ಡಾ. ಕಾಂತಿ ಸುರೇಶ್​ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಳಗ್ಗೆ 9.30ಕ್ಕೆ ಸಿಎ ಕಮಲಾಕ್ಷ ಕಾಮತ್​ ಉದ್ಘಾಟಿಸಲಿದ್ದಾರೆ. ಕ್ರಿಯೇಟಿವ್​ ಕಾಲೇಜು ಪ್ರಾಂಶುಪಾಲ ಗಣಪತಿ ಮುಖ್ಯಅತಿಥಿಯಾಗಿರುವರು. ಸಾಯಂಕಾಲ 4 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ವಿನಯ್​ ಕುಮಾರ್​ ಸೊರಕೆ, ಶಾಸಕ ವಿ. ಸುನಿಲ್​ ಕುಮಾರ್​ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗುವ ಶಾಲಾ ತಂಡಗಳಿಗೆ ಪ್ರಥಮ ರೂ. 25,000, ದ್ವೀತಿಯ ರೂ. 20,000 ಹಾಗೂ ತೃತೀಯ ರೂ. 15,000 ನಗದು ಬಹುಮಾನದೊಂದಿಗೆ ಆಕರ್ಷಕ ಟ್ರೋಫಿ ನೀಡಲಾಗುವುದು. ಜೊತೆಗೆ 4 ಮತ್ತು 5ನೇ ಸ್ಥಾನ ಪಡೆಯುವ ತಂಡಗಳಿಗೆ ತಲಾ ರೂ. 5,000 ಬಹುಮಾನ ನೀಡಲಾಗುತ್ತದೆ. ರಾಜ್ಯದಾದ್ಯಂತ ಸುಮಾರು 30 ಜಿಲ್ಲೆಗಳಿಂದ 600ಕ್ಕೂ ಹೆಚ್ಚು ವಿಶೇಷ ಮಕ್ಕಳು, ಪೋಷಕರು ಹಾಗೂ ಶಿಕ್ಷಕರು ಭಾಗವಹಿಸಲಿದ್ದಾರೆ ಎಂದರು.

ಒಕ್ಕೂಟ ಪ್ರ.ಕಾ. ವಸಂತಕುಮಾರ್​ ಶೆಟ್ಟಿ, ಪದಾಧಿಕಾರಿಗಳಾದ ಜೈವಿಠಲ್​, ರವೀಂದ್ರ ಎಚ್​., ಶಶಿಕಲಾ ಕೋಟ್ಯಾನ್​ ಮೊದಲಾದವರು ಉಪಸ್ಥಿತರಿದ್ದರು.