Saturday, June 14, 2025
HomeUncategorizedಮಣಿಗೇರಿ ಬೈಲು ಇಮ್ಮಡಿ‌‌ ಹರಿಹರನ ಶಾಸನ ಅಧ್ಯಯನ

ಮಣಿಗೇರಿ ಬೈಲು ಇಮ್ಮಡಿ‌‌ ಹರಿಹರನ ಶಾಸನ ಅಧ್ಯಯನ

ಕುಂದಾಪುರ ತಾಲೂಕು ಹಾರ್ದಳ್ಳಿ-ಮಂಡಳ್ಳಿ ಗ್ರಾಮದ ಮಣಿಗೇರಿ ಬೈಲಿನ ಶೇಖರ ಶೆಟ್ಟಿಯವರ ಕಂಬಳಗದ್ದೆಯಲ್ಲಿರುವ ಶಾಸನದ ಅಧ್ಯಯನವನ್ನು ಈ‌ ಮೊದಲು ಇತಿಹಾಸತಜ್ಞ ಡಾ. ಬಿ.ವಸಂತ ಶೆಟ್ಟಿಯವರು ಮಾಡಿದ್ದು, ಆದರೆ ಅವರ ಅಕಾಲಿಕ ನಿಧಾನದಿಂದಾಗಿ‌ ಈ ಶಾಸನದ ಪ್ರಕಟಣೆಯು ಆಗಿರಲಿಲ್ಲ. ಇತ್ತೀಚೆಗೆ ಪೂರ್ಣಿಮ ಕಮಲಶಿಲೆಯವರು ಈ ಶಾಸನದ ಕುರಿತ ಮಾಹಿತಿಯನ್ನು ತುಮಕೂರು ವಿಶ್ವವಿದ್ಯಾಲಯದ ಪಿಹೆಚ್.ಡಿ ಸಂಶೋಧನಾರ್ಥಿ ವೈಶಾಲಿ ಜಿ.ಆರ್ (ಪ್ರಸ್ತುತ ಸರ್ಕಾರಿ‌ ಪ್ರಥಮ ದರ್ಜೆ ಕಾಲೇಜು-ಭಟ್ಕಳ,‌ ಇತಿಹಾಸ ವಿಭಾಗದಲ್ಲಿನ ಸಹಾಯಕ ಪ್ರಾಧ್ಯಾಪಕಿ) ಇವರಿಗೆ ತಿಳಿಸಿದಾಗ ಇವರು ಇಲ್ಲಿನ ಸ್ಥಳೀಯರಾದ ವಿವೇಕ್ ಮಿತ್ಯಾಂತರ ಸಹಕಾರದಲ್ಲಿ ಸ್ಥಳಕ್ಕೆ ಭೇಟಿ ನೀಡಿ, ಈ ಶಾಸನವನ್ನು ತುಮಕೂರು ವಿಶ್ವವಿದ್ಯಾಲಯದ ಪಿಹೆಚ್.ಡಿ ಸಂಶೋಧನಾರ್ಥಿ ಶಶಿಕುಮಾರ್ ನಾಯ್ಕ್ ಇವರಲ್ಲಿ ಪ್ರಾಥಮಿಕವಾಗಿ ಓದಿಸಿರುತ್ತಾರೆ.

ನಂತರದಲ್ಲಿ ಈ ಶಾಸನವನ್ನು ಇತಿಹಾಸ ಮತ್ತು ಪುರಾತತ್ತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಅಧ್ಯಯನಕ್ಕೆ ಒಳಪಡಿಸಿ ಈ‌ ಕೆಳಕಂಡ‌ ಮಾಹಿತಿಯನ್ನು ನೀಡಿರುತ್ತಾರೆ.

ಗಣಪತಿಯನ್ನು ಸ್ತುತಿಸಿ, “ನಮಸ್ತುಂಗ ಶಿರಶ್ಚುಂಬಿ…’ ಎಂಬ ಶಿವನ ಕುರಿತ ಮಂಗಳ ಶ್ಲೋಕದೊಂದಿಗೆ ಪ್ರಾರಂಭವಾಗುವ ಈ ಶಾಸನವು ಇಮ್ಮಡಿ ಹರಿಹರನ (ಸಾ.ಶ.ವ 1377-1404) ಕಾಲಕ್ಕೆ ಸೇರುತ್ತದೆ. ಕಣ ಶಿಲೆಯಲ್ಲಿ ಕೊರೆಯಲ್ಪಟ್ಟ ಶಾಸನದ ಮೇಲ್ಭಾಗದ ಪಟ್ಟಿಕೆಯಲ್ಲಿ ಸೂರ್ಯ-ಚಂದ್ರ, ಮಧ್ಯದಲ್ಲಿ ಶಿವಲಿಂಗ, ಇಕ್ಕೆಲದಲ್ಲಿ ಕೇಶ ರಾಶಿಯನ್ನು ಹೊಂದಿದ ಪದ್ಮಾಸನದಲ್ಲಿ ಕೈ ಮುಗಿದು ಕುಳಿತ ಭಕ್ತನ ವಿಗ್ರಹ, ಕಾಲುದೀಪ ಹಾಗೂ ನಂದಿಯ ಉಬ್ಬು ಕೆತ್ತನೆಯನ್ನು ಮಾಡಲಾಗಿದೆ. 14ನೆಯ ಶತಮಾನದ ಕನ್ನಡ ಲಿಪಿಯಲ್ಲಿರುವ ಈ ಶಾಸನವು 34 ಸಾಲುಗಳನ್ನು ಒಳಗೊಂಡಿದ್ದು, ಶಾಸನದ ಕೆಳಭಾಗದಲ್ಲಿನ‌ ಬರಹಗಳು ನಶಿಸಿರುತ್ತವೆ.

ಇಮ್ಮಡಿ ಹರಿಹರನನ್ನು ಬಿರುದಾವಳಿಗಳಿಂದ ವರ್ಣಿಸಿರುವ ಈ ಶಾಸನವು ಶಕವರುಷ 1312ನೆಯ ಶುಕ್ಲ ಸಂವತ್ಸರದ ಶ್ರಾವಣ ಶುದ್ಧ 7 ಸೋಮವಾರ (ಸಾ.ಶ.ವ 1390)ದಂದು ಕೊಟ್ಟಿರುವ ಭೂ‌‌ದಾನವನ್ನು ದಾಖಲಿಸುತ್ತದೆ. ಬಾರಕೂರ ರಾಜ್ಯವನ್ನು ಮಲ್ಲಪ ಒಡೆಯರು ಪ್ರತಿಪಾಲಿಸುತ್ತಿದ್ದ ಕಾಲದಲ್ಲಿ ಕುಂದುಗುಳದ ಜೈನ ಮಾದರಸರ ಮಕ್ಕಳು ಚೌಡಪಗಳಿಗೆ ನಾಲ್ವತ್ತುನಾಡ ಹಾರದವಳ್ಳಿ ಒಳಗಣ ವೋಣಿಯ ಕೋರೆಯ ವಾಸು ಎಡಹಾಳಿಯನ (ಪ್ರಸ್ತುತ ಯಡಿಯಾಳ) ಮಗ ವರದೇಶ್ವರ ಎಡಹಾಳಿ ಹಾಗೂ ನಾರಣ ಎಡಹಾಳಿಯನ ಮಗ ಕೋಟೀಸ್ವರ ಎಡಹಾಳಿ ಇಬ್ಬರೂ ತಮ್ಮೊಳಗೆ ಏಕಸ್ತರಾಗಿ ಕೊಟ್ಟ ದಾನದ ಕುರಿತು ತಿಳಿಸುತ್ತದೆ.‌

ಕೊಟ್ಟಂತ ಭೂಮಿಯ ಚತುಸ್ಸೀಮೆಗಳನ್ನು ಉಲ್ಲೇಖಿಸಿರುವುದರ ಜೊತೆಗೆ ಇದರಲ್ಲಿ ಬರುವ 28 ಮೂಡೆ ಭತ್ತದೊಂದಿಗೆ ಅಷ್ಟಭೋಗ ತೇಜಸಾಂಮ್ಯವನೂ ಇವರುಗಳು (ವರದೇಶ್ವರ ಮತ್ತು ಕೋಟೀಸ್ವರ ಎಡಹಾಳಿಯರು) ಚೌಡಪಗಳಿಗೆ ಕೊಟ್ಟರು. ಇದಕ್ಕೆ ಹಾರದವಳಿಯ ನಾಲ್ವರು ನಾಯಕರು ಮುಂದಾಮುಂಡಿಯಾಗಿ 10 ಕಾಟಿ ಗದ್ಯಾಣ ಹೊನ್ನನು ತೆರಿಸಿಕೊಂಡು ಮೂರುಕೇರಿಯ ಸೋಮಯ್ಯ (ಸೋಮೇಶ್ವರ) ದೇವರಿಗೆ ಪ್ರತಿ ವರ್ಷ ಶಿವರಾತ್ರಿಯಲ್ಲಿ ಒಂದು ಹಾಡ ತೆಂಗಿನ ಎಣ್ಣೆ, ಮಡೆಯರ (ಮಡಿಯಾರ) ಮಲ್ಲಿಕಾರ್ಜುನ ದೇವರಿಗೆ ನಾಡಿನ ನಾಲ್ವತ್ತು ಹಾನೆ ಭತ್ತ ಹಾಗೂ ನಂದಿಕೇಶ್ವರ ದೇವರಿಗೆ ಯಿಪ್ಪಾನೆ ನಯಿವೇದ್ಯಕ್ಕೆ ಅಕ್ಕಿಯನ್ನು ಕೊಟ್ಟು ಬರಬೇಕೆಂದು ಶಾಸನವು ಉಲ್ಲೇಖಿಸುತ್ತದೆ. ಮಾತ್ರವಲ್ಲದೇ, ಕೊಟ್ಟಂತಹ ಈ ದಾನದಲ್ಲಿ ಯಾವುದೇ ರೀತಿಯ ಅನ್ಯಾಯ ಸಲ್ಲದೆಂದು ತಿಳಿಸುತ್ತದೆ.

ಶಾಸನದಲ್ಲಿ‌ ಉಲ್ಲೇಖಗೊಂಡ ಇತರೆ ಪ್ರಮುಖ ವ್ಯಕ್ತಿಗಳೆಂದರೆ ಸಿವ ಕೆಡಿಲ (ಕೆದಿಲ)ನ ಹಿರಿಯಣ್ಣ ಚಂದ್ರ, ಮಡಿಯಾರ‌ ದೇವರ ಧನಂಜಯ ಕೆಡಿಲ, ಗೋವಿಂದ ಹೆಬ್ಬಾರ, ಕೇಶವ ಭಟ್ಟ. ಶಾಸನದ ಕೊನೆಯ‌ ಬರಹಗಳು ಅಸ್ಪಷ್ಟವಾಗಿದ್ದು, ಗೋಚರಿಸುವ ಕೆಲವೊಂದು ಬರಹಗಳ‌ ಮೂಲಕ ಇಲ್ಲಿ ಶಾಪಾಶಯ ವಾಕ್ಯವನ್ನು ಉಲ್ಲೇಖಿಸುರುವುದು ಕಂಡುಬರುತ್ತದೆ.

ಕ್ಷೇತ್ರಕಾರ್ಯ ಶೋಧನೆಯಲ್ಲಿ ಇತಿಹಾಸ ಆಸಕ್ತ ‌ಕಂಚಾರ್ತಿ ರಾಜೇಶ್ವರ ಉಪಾಧ್ಯಾಯ ಹಾಗೂ ನವನ್ ಶೆಟ್ಟಿ ಸಹಕಾರ ‌ನೀಡಿರುತ್ತಾರೆ.

RELATED ARTICLES
- Advertisment -
Google search engine

Most Popular