ಹಿರಿಯ ಯಕ್ಷಗಾನ ಕಲಾವಿದರೊಂದಿಗೆ ‘ಸುಹೃತ್ ಯಾನ’

0
4

ಉಡುಪಿ : ಕಟೀಲು ದೇವಳ, ಕಟೀಲು ಮೇಳದ ಯಜಮಾನರು ಹಾಗೂ ಯಕ್ಷಗಾನ ಅಭಿಮಾನಿಗಳ ತಂಡದ ಸಹಯೋಗದಲ್ಲಿ ಆರಂಭಗೊಂಡಿರುವ ಹಿರಿಯ ಕಲಾವಿದರ ಭೇಟಿಯ ‘ಸುಹೃತ್ ಯಾನ’ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ನೇತೃತ್ವದ ತಂಡ ಸೆ.19ರಂದು ಭಾಗವಹಿಸಿತು.

ಕಟೀಲು ಮೇಳದಲ್ಲಿ ದಶಕಗಳ ಕಾಲ ಕಲಾ ಸೇವೆ ಸಲ್ಲಿಸಿ ಇದೀಗ ನಿವೃತ್ತ ಜೀವನ ನಡೆಸುತ್ತಿರುವ ಹಿರಿಯ ಕಲಾವಿದರ ಮನೆಗಳಿಗೆ ತೆರಳಿ ಅವರನ್ನು ಗೌರವಿಸುವುದು ‘ಸುಹೃತ್ ಯಾನ’ದ ಉದ್ದೇಶವಾಗಿದೆ. ಕಟೀಲು ಮಾತೆಯ ಶೇಷವಸ್ತ್ರ, ಶ್ರೀಮುಡಿ ಗಂಧಪ್ರಸಾದ, ಅಕ್ಕಿ, ದವಸಧಾನ್ಯ, ಫಲವಸ್ತು ಹಾಗೂ ನಗದು ಗೌರವದೊಂದಿಗೆ ಹಿರಿಯ ಕಲಾವಿದರನ್ನು ಸನ್ಮಾನಿಸಿ, ಅವರೊಂದಿಗೆ ಕೆಲಕಾಲ ಕಳೆದು ಹಳೆಯ ನೆನಪುಗಳು ಹಾಗೂ ಕಲಾ ಜೀವನದ ಅನುಭವಗಳನ್ನು ಹಂಚಿಕೊಳ್ಳಲಾಗುತ್ತದೆ.

ಸೆ.19ರಂದು ಬೆಳಗ್ಗೆ 7 ಗಂಟೆಗೆ ಆರಂಭಗೊಂಡ ಯಾನ ಅಪರಾಹ್ನ 2 ಗಂಟೆಯವರೆಗೆ ನಡೆಯಿತು. ಶ್ರೀ ಹರಿನಾರಾಯಣದಾಸ ಅಸ್ರಣ್ಣ ಅವರ ನೇತೃತ್ವದ ತಂಡ ಬಡಗು ಭಾಗದ ಹಿರಿಯ ಕಲಾವಿದರನ್ನು ಭೇಟಿ ಮಾಡಲು ಆಗಮಿಸಿದ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಪದಾಧಿಕಾರಿಗಳು ಅವರೊಂದಿಗೆ ಸೇರಿಕೊಂಡು ನಾಲ್ವರು ಹಿರಿಯ ಸ್ತ್ರೀವೇಷಧಾರಿ ಕಲಾವಿದರನ್ನು ಭೇಟಿಯಾಗಿ ಗೌರವಿಸಿದರು.

ಬೆಳಗ್ಗೆ ಶಂಕರನಾರಾಯಣ ಸಮೀಪ ಪತ್ನಿಯೊಂದಿಗೆ ಸರಳ ಮನೆಯಲ್ಲಿ ವಾಸಿಸುತ್ತಿರುವ ಹಿರಿಯ ಕಲಾವಿದ ಸಂಜೀವ ಬಳೆಗಾರ ಅವರನ್ನು ಭೇಟಿ ಮಾಡಲಾಯಿತು. ತಮ್ಮ ಮನೆಗೆ ದೊಡ್ಡ ತಂಡವೊಂದು ಆಗಮಿಸಿ ಗೌರವ ಸಲ್ಲಿಸಿದ್ದರಿಂದ ದಂಪತಿ ಸಂತಸ ಹಾಗೂ ಭಾವುಕತೆಯಿಂದ ಕಣ್ಣೀರಿಟ್ಟರು. ತಮ್ಮ ಯಕ್ಷಗಾನ ತಿರುಗಾಟ, ಒಡನಾಡಿ ಕಲಾವಿದರು ಹಾಗೂ ಕಟೀಲು ಮೇಳದಲ್ಲಿನ ಅನುಭವಗಳನ್ನು ಅವರು ಹಂಚಿಕೊಂಡರು.

ಬಳಿಕ ಗಾವಳಿಯಲ್ಲಿ ಮಗಳು ಹಾಗೂ ಮೊಮ್ಮಕ್ಕಳೊಂದಿಗೆ ವಾಸಿಸುತ್ತಿರುವ ಬಾಬು ಕುಲಾಲ ಅವರನ್ನು ಭೇಟಿಯಾದರು. ಅನಾರೋಗ್ಯದಿಂದ ಚೇತರಿಸಿಕೊಂಡು ಲವಲವಿಕೆಯಿಂದಿರುವ ಅವರನ್ನು ಕಂಡು ತಂಡ ಸಂತಸ ವ್ಯಕ್ತಪಡಿಸಿತು. ತಾವು ಕಟೀಲು ಮೇಳ ಸೇರಿದ ಸಂದರ್ಭ ಹಾಗೂ ಬಲಿಪ ನಾರಾಯಣ ಭಾಗವತರ ಕಲಾ ಶಿಸ್ತಿನ ಕುರಿತು ನೆನಪುಗಳನ್ನು ಹಂಚಿಕೊಂಡ ಕುಲಾಲರು, ಬಲಿಪ ಭಾಗವತರ ಶಿಷ್ಯನಾಗಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿ ಭಾವುಕರಾದರು.

ಮಧ್ಯಾಹ್ನ ಉಡುಪಿಯಲ್ಲಿ ಹಿರಿಯ ಕಲಾವಿದ ಪುಂಡರೀಕಾಕ್ಷ ಉಪಾಧ್ಯಾಯ ಅವರನ್ನು ಭೇಟಿ ಮಾಡಲಾಯಿತು. ಇಳಿವಯಸ್ಸಿನಲ್ಲಿಯೂ ಅವರ ಜೀವನೋತ್ಸಾಹ ಹಾಗೂ ಕಲೆಯ ಬಗೆಗಿನ ಆಸಕ್ತಿ ತಂಡದ ಗಮನ ಸೆಳೆಯಿತು. ಸುಮಾರು ಒಂದು ಗಂಟೆ ಅವರೊಂದಿಗೆ ಕಳೆದು ಅವರ ಯಕ್ಷಗಾನ ಪಯಣದ ಅನುಭವಗಳನ್ನು ಆಲಿಸಲಾಯಿತು.

ಮುಂದೆ ಇನ್ನಂಜೆಯಲ್ಲಿ ವಾಸವಾಗಿರುವ 95ರ ಹರೆಯದ ಹಿರಿಯ ಯಕ್ಷಗಾನ ಕಲಾವಿದ ಕೋಳ್ಯೂರು ರಾಮಚಂದ್ರ ರಾಯ ಅವರನ್ನು ಅವರ ಮನೆಯಲ್ಲಿ ಭೇಟಿ ಮಾಡಲಾಯಿತು. ವೃದ್ಧ ತಂದೆಯನ್ನು ಮಕ್ಕಳು ಪ್ರೀತಿಯಿಂದ ಹಾಗೂ ಒಗ್ಗಟ್ಟಿನಿಂದ ಆರೈಕೆ ಮಾಡುತ್ತಿರುವುದು ಗಮನ ಸೆಳೆಯಿತು. ಕುಟುಂಬದ ಎಲ್ಲ ಸದಸ್ಯರು ತಂಡವನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಕೋಳ್ಯೂರು ರಾಮಚಂದ್ರ ರಾಯರಿಗೆ ಸಂದಿರುವ ಪ್ರಶಸ್ತಿ, ಸಮ್ಮಾನಗಳನ್ನು ಅಚ್ಚುಕಟ್ಟಾಗಿ ಸಂರಕ್ಷಿಸಿರುವುದನ್ನು ಕಂಡ ತಂಡ, ಅವರ ಯಕ್ಷಗಾನ ಜೀವನದ ಹಲವು ನೆನಪುಗಳನ್ನು ಮೆಲುಕು ಹಾಕಿತು. ಕುಟುಂಬದವರು ವಿಶೇಷ ಆತಿಥ್ಯ ನೀಡಿದ್ದು, ಹಿರಿಯ ಕಲಾವಿದರೊಂದಿಗೆ ಒಂದು ಗಂಟೆಗೂ ಅಧಿಕ ಕಾಲ ಆತ್ಮೀಯವಾಗಿ ಸಂವಾದ ನಡೆಸಲಾಯಿತು.

ಕಟೀಲು ಮಾತೆಯ ಅನನ್ಯ ಭಕ್ತರಾದ ಪುಂಡರೀಕಾಕ್ಷ ಉಪಾಧ್ಯಾಯ ಹಾಗೂ ಕೋಳ್ಯೂರು ರಾಮಚಂದ್ರ ರಾಯರು, ಆಸ್ರಣ್ಣ ಕುಟುಂಬದ ಮೇಲಿನ ಗೌರವವನ್ನು ವ್ಯಕ್ತಪಡಿಸಿದರು. ತಮ್ಮ ಕಾರ್ಯಕ್ರಮಗಳ ನಡುವೆಯೂ ಸಮಯ ಮಾಡಿಕೊಂಡು ಆಗಮಿಸಿದ ಶ್ರೀ ಹರಿನಾರಾಯಣದಾಸ ಅಸ್ರಣ್ಣರು ಶ್ರೀದೇವಿಯ ಗಂಧಪ್ರಸಾದ ನೀಡಿ ಹರಸಿದ್ದಕ್ಕೆ ಇಬ್ಬರೂ ಭಾವುಕರಾಗಿ ಕೃತಜ್ಞತೆ ಸಲ್ಲಿಸಿದರು.

ಬಾಳಿನ ಮುಸ್ಸಂಜೆಯಲ್ಲಿರುವ ಹಿರಿಯ ಕಲಾವಿದರಿಗೆ ಯಕ್ಷಗಾನ ಕಲಾರಂಗದ ವತಿಯಿಂದ ಗೌರವದ ಉಡುಗೊರೆ ನೀಡಿ, ಅವರ ಆಶೀರ್ವಾದ ಪಡೆಯಲಾಯಿತು. ಹಿರಿಯ ಕಲಾವಿದರೊಂದಿಗೆ ಕಳೆದುಹೋದ ಈ ದಿನವು ಕಲಾ ಪರಂಪರೆಯ ನೆನಪುಗಳನ್ನು ಮೆಲುಕು ಹಾಕಿಸುವುದರ ಜೊತೆಗೆ ಆತ್ಮೀಯತೆ ಹಾಗೂ ಗೌರವದ ಸಾರ್ಥಕ ಅನುಭವ ನೀಡಿತು.