ಕಾಪು: ಗ್ರಾಮೀಣ ಕಾಂಗ್ರೆಸ್ ಸಮಿತಿಯ ಫಲಾನುಭವಿ ಸಮಾವೇಶವನ್ನು ಸರ್ಕಾರಿ ಕಾರ್ಯಕ್ರಮವೆಂಬಂತೆ ಬಿಂಬಿಸಿ ಜನರನ್ನು ಆಹ್ವಾನಿಸಲಾಗುತ್ತಿದೆ ಎಂದು ಬಿಜೆಪಿ ಕಾಪು ಮಂಡಲ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಉದ್ಯಾವರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಾಪು ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗದ ಜನರನ್ನು ಗೃಹಲಕ್ಷ್ಮಿ ಯೋಜನೆಯ ಕೆವೈಸಿ (KYC) ಮಾಡಿಸುವ ನೆಪದಲ್ಲಿ ಕಾಂಗ್ರೆಸ್ ಸಮಾವೇಶಕ್ಕೆ ಆಹ್ವಾನಿಸಲಾಗುತ್ತಿದೆ. ಅಲ್ಲದೆ, ಸಮಾವೇಶಕ್ಕೆ ಹಾಜರಾಗದಿದ್ದರೆ ಮುಂದಿನ ಕಂತಿನ ಹಣ ಜಮೆಯಾಗುವುದಿಲ್ಲ ಎಂಬ ರೀತಿಯಲ್ಲಿ ಜನರಲ್ಲಿ ಭೀತಿ ಹಾಗೂ ಗೊಂದಲ ಮೂಡಿಸಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
ಸರ್ಕಾರದ ಯೋಜನೆಯ ಫಲಾನುಭವಿಗಳಿಗೆ ಕೆವೈಸಿ ಮಾಡಿಸುವ ಪ್ರಕ್ರಿಯೆಗೂ ರಾಜಕೀಯ ಪಕ್ಷದ ಸಮಾವೇಶಕ್ಕೂ ಸಂಬಂಧ ಕಲ್ಪಿಸಿ ಜನರನ್ನು ಆಹ್ವಾನಿಸುವುದು ಸರಿಯಲ್ಲ ಎಂಬುದು ಬಿಜೆಪಿ ಮುಖಂಡರ ಆಕ್ಷೇಪವಾಗಿದೆ.
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಯಾವುದೇ ರಾಜಕೀಯ ಕಾರ್ಯಕ್ರಮಕ್ಕೆ ಹಾಜರಾಗದಿದ್ದರೂ ಯೋಜನೆಯ ಸೌಲಭ್ಯದಿಂದ ವಂಚಿತರಾಗುವ ಭೀತಿ ಹೊಂದುವ ಅಗತ್ಯವಿಲ್ಲ. ಈ ಕುರಿತು ಜನರಲ್ಲಿ ಉಂಟಾಗಿರುವ ಗೊಂದಲವನ್ನು ನಿವಾರಿಸಬೇಕು ಎಂದು ಜಿತೇಂದ್ರ ಶೆಟ್ಟಿ ಉದ್ಯಾವರ ಆಗ್ರಹಿಸಿದ್ದಾರೆ.

