
ಆರೋಗ್ಯಕರ ಬದುಕಿನತ್ತ ವಿದ್ಯಾರ್ಥಿಗಳ ಹೆಜ್ಜೆ
ಮಂಗಳೂರು : ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಆರೋಗ್ಯ, ಶಿಸ್ತು ಹಾಗೂ ಸನ್ಮಾರ್ಗದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.), ಮಂಗಳೂರು ತಾಲೂಕು, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಸೋಮೇಶ್ವರ ವಲಯ ಹಾಗೂ ಭಗವತಿ ಆಂಗ್ಲ ಮಾಧ್ಯಮ ಶಾಲೆಯ ಸಹಯೋಗದಲ್ಲಿ ಗುರುವಾರ “ಸ್ವಾಸ್ಥ್ಯ ಸಂಕಲ್ಪ” ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಮಂಗಳೂರು ತಾಲೂಕು ಅಧ್ಯಕ್ಷೆ ಸುಖಲತಾ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಶಾಲೆಯ ಅಧ್ಯಕ್ಷರು ಹಾಗೂ ಮೂಡಾ ನಿಕಟಪೂರ್ವ ಅಧ್ಯಕ್ಷರಾದ ಸದಾಶಿವ ಉಳ್ಳಾಲ್ ಅವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ದಕ್ಷಿಣ ಕನ್ನಡ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮಿ ಗಟ್ಟಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಸ್ವಾಸ್ಥ್ಯ ಸಂಕಲ್ಪದ ಪರಿಕಲ್ಪನೆ, ಉದ್ದೇಶ ಹಾಗೂ ಪ್ರಸ್ತುತ ಸಮಾಜದಲ್ಲಿ ಯುವಜನರು ಎದುರಿಸುತ್ತಿರುವ ವಿವಿಧ ಸವಾಲುಗಳ ಕುರಿತು ಮಾಹಿತಿ ನೀಡಿದರು.
ವಿದ್ಯಾರ್ಥಿಗಳು ದುಶ್ಚಟಗಳಿಗೆ ಹಾಗೂ ದಾರಿ ತಪ್ಪಿಸುವ ಚಟುವಟಿಕೆಗಳಿಗೆ ಒಳಗಾಗಲು ಕಾರಣವಾಗುವ ಅಂಶಗಳು, ಅವುಗಳಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ ಅವುಗಳಿಂದ ದೂರವಿದ್ದು ಆರೋಗ್ಯಕರ ಮತ್ತು ಶಿಸ್ತಿನ ಜೀವನ ನಡೆಸುವ ಅಗತ್ಯದ ಕುರಿತು ಅವರು ಜಾಗೃತಿ ಮೂಡಿಸಿದರು. “ಉತ್ತಮ ಆರೋಗ್ಯವೇ ಉತ್ತಮ ಭವಿಷ್ಯದ ಅಡಿಪಾಯ” ಎಂಬ ಸಂದೇಶದೊಂದಿಗೆ ವಿದ್ಯಾರ್ಥಿಗಳನ್ನು ಆರೋಗ್ಯಕರ ಜೀವನಶೈಲಿಯತ್ತ ಪ್ರೇರೇಪಿಸಲಾಯಿತು.
ಇದೇ ಸಂದರ್ಭದಲ್ಲಿ ಶಾಲೆಯ ಸುಮಾರು 200 ವಿದ್ಯಾರ್ಥಿ–ವಿದ್ಯಾರ್ಥಿನಿಯರು ಸ್ವಾಸ್ಥ್ಯ ಸಂಕಲ್ಪ ಪ್ರತಿಜ್ಞೆ ಸ್ವೀಕರಿಸಿ, ಆರೋಗ್ಯಕರ ಜೀವನ ನಡೆಸುವ ಹಾಗೂ ಸಮಾಜಕ್ಕೆ ಮಾದರಿಯಾಗುವ ಸಂಕಲ್ಪ ಕೈಗೊಂಡರು.

ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಮಂಗಳೂರು ತಾಲೂಕು ನಿಕಟಪೂರ್ವ ಅಧ್ಯಕ್ಷರಾದ ಚಂದ್ರಶೇಖರ್ ಉಚ್ಚಿಲ್, ತಾಲೂಕು ಯೋಜನಾಧಿಕಾರಿಗಳು, ವಲಯದ ಮೇಲ್ವಿಚಾರಕರು, ಸ್ಥಳೀಯ ಸೇವಾಪ್ರತಿನಿಧಿಗಳು, ಶಾಲೆಯ ಮುಖ್ಯ ಶಿಕ್ಷಕರು, ಸಹಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆಯಿಂದ ಕಾರ್ಯಕ್ರಮ ಅರ್ಥಪೂರ್ಣವಾಗಿ ಹಾಗೂ ಯಶಸ್ವಿಯಾಗಿ ನೆರವೇರಿತು.
