ಸಾರ್ವಜನಿಕ ಅಭಿಪ್ರಾಯ ಸಂಗ್ರಹಕ್ಕೆ ಮುಖ್ಯಮಂತ್ರಿಗಳ ಮನ್ನಣೆ
-ಮಂದಾರ ರಾಜೇಶ್
ದಕ್ಷಿಣ ಕನ್ನಡ ಜಿಲ್ಲೆಯನ್ನು ‘ಮಂಗಳೂರು ಜಿಲ್ಲೆ’ಯಾಗಿ ಮರುನಾಮಕರಣ ಮಾಡುವ ಐತಿಹಾಸಿಕ ಪ್ರಸ್ತಾವನೆಗೆ ಸಂಬಂಧಿಸಿದಂತೆ ಆಡಳಿತ ಮಟ್ಟದಲ್ಲಿ ಗಂಭೀರ ಚಿಂತನೆ ನಡೆದಿದ್ದು, ಅತಿ ಶೀಘ್ರದಲ್ಲೇ ಈ ಕುರಿತು ಮಹತ್ವದ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ ಎಂಬ ಸ್ಪಷ್ಟ ಸುಳಿವು ದೊರೆತಿದೆ.
ಸಾರ್ವಜನಿಕರ ಅಭಿಪ್ರಾಯಕ್ಕೆ ಸರ್ವೋಚ್ಚ ಮನ್ನಣೆ ನೀಡಿರುವ ಗೌರವಾನ್ವಿತ ಮುಖ್ಯಮಂತ್ರಿಗಳು, ಈ ಕುರಿತು ಸಾಧಕ-ಬಾಧಕಗಳ ಪರಿಶೀಲನೆಗೆ ಮುನ್ನುಡಿ ಬರೆದಿದ್ದಾರೆ.
ಜಿಲ್ಲೆಯ ಮರುನಾಮಕರಣದ ವಿಚಾರದಲ್ಲಿ ಜನಸಾಮಾನ್ಯರ ಆಶಯವೇ ಅಂತಿಮವಾಗಬೇಕು ಎಂಬ ಸ್ಪಷ್ಟ ನಿಲುವನ್ನು ಸರ್ಕಾರ ತಾಳಿದೆ.
ಈ ನಿಟ್ಟಿನಲ್ಲಿ ಮಂಗಳೂರು ಹೆಸರು ಬೇಕು ಎನ್ನುವವರು ಯಾವ ಕಾರಣಕ್ಕಾಗಿ ಬೇಕು ಹಾಗೂ ಬೇಡ ಎನ್ನುವವರು ಯಾವ ಕಾರಣಕ್ಕಾಗಿ ಬೇಡ ಎಂಬ ತಮ್ಮ ತಾರ್ಕಿಕ ಅಭಿಪ್ರಾಯಗಳನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ.
ಸಾರ್ವಜನಿಕರ ಎಲ್ಲ ಅನಿಸಿಕೆಗಳನ್ನು ಕ್ರೋಢೀಕರಿಸಿ ಅಧಿಕೃತ ಮಾಹಿತಿಯನ್ನು ಸಂಗ್ರಹಿಸಲು ಗೌರವಾನ್ವಿತ ಮುಖ್ಯಮಂತ್ರಿಗಳು ಕೋರಿಕೊಂಡಿದ್ದಾರೆ.
ತುಳುನಾಡಿನ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಈ ಪ್ರದೇಶಕ್ಕೆ ‘ಮಂಗಳೂರು ಜಿಲ್ಲೆ’ ಎಂದು ಹೊಸ ನಾಮಕರಣಗೊಳ್ಳುವ ಶುಭ ದಿನವು ಅತಿ ಶೀಘ್ರದಲ್ಲೇ ಬರಲಿದೆ ಎಂಬ ಬಲವಾದ ನಿರೀಕ್ಷೆ ಸ್ಥಳೀಯ ಸಾರ್ವಜನಿಕರದ್ದಾಗಿದೆ. ಸಾರ್ವಜನಿಕ ವಲಯದಿಂದ ವ್ಯಕ್ತವಾಗುತ್ತಿರುವ ಉತ್ಸಾಹ ಮತ್ತು ಪ್ರಸ್ತಾವನೆಯ ಪರಿಶೀಲನಾ ಹಂತವನ್ನು ಗಮನಿಸಿದರೆ, ಸರ್ಕಾರದಿಂದ ಶೀಘ್ರದಲ್ಲೇ ಸಕಾರಾತ್ಮಕ ನಿರ್ಧಾರ ಪ್ರಕಟಗೊಳ್ಳುವ ಮುನ್ಸೂಚನೆ ಸಿಕ್ಕಿದೆ.
ಸಾರ್ವಜನಿಕರ ಈ ಪ್ರಸ್ತಾವನೆಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಗೌರವಾನ್ವಿತ ಮುಖ್ಯಮಂತ್ರಿಗಳು, ಜನರಿಂದ ಬರುವ ಮಾಹಿತಿಯನ್ನು ವ್ಯವಸ್ಥಿತವಾಗಿ ಸಂಗ್ರಹಿಸಲಾಗುವುದು ಎಂದು ತಿಳಿಸಿದ್ದಾರೆ. ಸಾರ್ವಜನಿಕರ ಒಮ್ಮತ ಮತ್ತು ಅಭಿಪ್ರಾಯದ ಆಧಾರದ ಮೇಲೆ ಸರ್ಕಾರವು ಅತಿ ಶೀಘ್ರದಲ್ಲೇ ಈ ಕುರಿತು ಉತ್ತಮವಾದ ಅಂತಿಮ ನಿರ್ಧಾರವನ್ನು ಪ್ರಕಟಿಸಲಿದೆ ಎಂದು ನಿರೀಕ್ಷಿಸಲಾಗಿದೆ.

