ಕಾಪುವಿನಲ್ಲಿ ಸೆ.15ರಂದು ‘ತಕಧಿಮಿ ನೃತ್ಯ ಸಂಭ್ರಮ’

0
10

ಪ್ರಾಥಮಿಕ, ಹಿರಿಯ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಸಮೂಹ ನೃತ್ಯ ಸ್ಪರ್ಧೆ

ಕಾಪು : ಜೇಸಿಐ ಕಾಪು, ನಂದಿನಿ ಪ್ರಾಂತ್ಯ, ವಲಯ 15, ಜೇಸಿಐ ಭಾರತ ವತಿಯಿಂದ ಜೆಸಿ ಸಪ್ತಾಹ 2026ರ ಅಂಗವಾಗಿ ಕಾಪು ತಾಲೂಕಿನ ಪ್ರಾಥಮಿಕ, ಹಿರಿಯ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಸಮೂಹ ನೃತ್ಯ ಸ್ಪರ್ಧೆ ‘ತಕಧಿಮಿ ನೃತ್ಯ ಸಂಭ್ರಮ’ ಆಯೋಜಿಸಲಾಗಿದೆ.

ಸೆಪ್ಟೆಂಬರ್ 15ರಂದು ಮಂಗಳವಾರ ಮಧ್ಯಾಹ್ನ 2.30ಕ್ಕೆ ಕಾಪು ಶ್ರೀ ವೀರಭದ್ರ ದೇವಸ್ಥಾನದ ಸಭಾಭವನದಲ್ಲಿ ಸ್ಪರ್ಧೆ ನಡೆಯಲಿದೆ. ವಿದ್ಯಾರ್ಥಿಗಳಲ್ಲಿರುವ ನೃತ್ಯ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಉದ್ದೇಶದಿಂದ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಪ್ರಾಥಮಿಕ, ಹಿರಿಯ ಹಾಗೂ ಪ್ರೌಢಶಾಲಾ ವಿಭಾಗಗಳಿಗೆ ಪ್ರತ್ಯೇಕವಾಗಿ ಸ್ಪರ್ಧೆ ನಡೆಯಲಿದ್ದು, ಪ್ರತಿ ವಿಭಾಗದಲ್ಲೂ ಪ್ರಥಮ ಬಹುಮಾನ ₹3,333 ಹಾಗೂ ಶಾಶ್ವತ ಫಲಕ, ದ್ವಿತೀಯ ಬಹುಮಾನ ₹2,222 ಹಾಗೂ ಶಾಶ್ವತ ಫಲಕ, ತೃತೀಯ ಬಹುಮಾನ ₹1,111 ಹಾಗೂ ಶಾಶ್ವತ ಫಲಕ ನೀಡಲಾಗುವುದು.

ಪ್ರತಿ ತಂಡದಲ್ಲಿ ಕನಿಷ್ಠ ಆರು ವಿದ್ಯಾರ್ಥಿಗಳು ಇರಬೇಕು. ನೃತ್ಯ ಪ್ರದರ್ಶನಕ್ಕೆ 5+1 ನಿಮಿಷಗಳ ಕಾಲಾವಕಾಶ ನೀಡಲಾಗಿದ್ದು, ಎಲ್ಲ ತಂಡಗಳು ಸ್ಪರ್ಧೆ ಆರಂಭಕ್ಕೆ ಕನಿಷ್ಠ 30 ನಿಮಿಷ ಮುಂಚಿತವಾಗಿ ಸ್ಥಳದಲ್ಲಿ ಹಾಜರಿರಬೇಕು. ನೃತ್ಯಕ್ಕೆ ಯಾವುದೇ ನಿರ್ದಿಷ್ಟ ವಿಷಯದ ನಿರ್ಬಂಧವಿಲ್ಲದೆ ಎಲ್ಲ ಶೈಲಿಯ ನೃತ್ಯ ಪ್ರಕಾರಗಳಿಗೂ ಅವಕಾಶ ಕಲ್ಪಿಸಲಾಗಿದೆ.

ಸ್ಪರ್ಧೆಯಲ್ಲಿ ಅಸಭ್ಯ ಪದಗಳು, ಅಶ್ಲೀಲ ನೃತ್ಯ ಭಂಗಿಗಳು ಹಾಗೂ ಸಮಾಜಕ್ಕೆ ವಿರುದ್ಧವಾದ ವಿಷಯಗಳಿಗೆ ಅವಕಾಶವಿರುವುದಿಲ್ಲ. ಹಾಡುಗಳನ್ನು ಪೂರ್ವಭಾವಿಯಾಗಿ ಎಂಪಿ3 ಮಾದರಿಯಲ್ಲಿ ಆಯೋಜಕರಿಗೆ ಸಲ್ಲಿಸಬೇಕು. ವೇದಿಕೆಯಲ್ಲಿ ಬೆಂಕಿ, ಪಟಾಕಿ, ಅಪಾಯಕಾರಿ ವಸ್ತುಗಳು ಅಥವಾ ಹಾನಿಕಾರಕ ಉಪಕರಣಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಸಂಗೀತ, ಅಭಿನಯ, ಸಮನ್ವಯ, ಕಥಾವಸ್ತು ಹಾಗೂ ವೇದಿಕೆ ಬಳಕೆಯ ಆಧಾರದ ಮೇಲೆ ಅಂಕಗಳನ್ನು ನೀಡಲಾಗುವುದು. ನಿರ್ಣಾಯಕರ ತೀರ್ಪು ಅಂತಿಮವಾಗಿದ್ದು, ಅದನ್ನು ಪ್ರಶ್ನಿಸಲು ಅವಕಾಶವಿರುವುದಿಲ್ಲ. ಶಿಸ್ತು ಉಲ್ಲಂಘಿಸುವ ತಂಡಗಳನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲಾಗುವುದು.

ಪ್ರಾಥಮಿಕ ವಿಭಾಗದಲ್ಲಿ 1ರಿಂದ 4ನೇ ತರಗತಿ, ಹಿರಿಯ ವಿಭಾಗದಲ್ಲಿ 5ರಿಂದ 7ನೇ ತರಗತಿ ಹಾಗೂ ಪ್ರೌಢ ವಿಭಾಗದಲ್ಲಿ 8ರಿಂದ 10ನೇ ತರಗತಿಯ ಶಾಲಾ ವಿದ್ಯಾರ್ಥಿಗಳಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ. ನೋಂದಾಯಿತ ತಂಡಗಳು ತಮ್ಮ ಶಾಲೆಯಿಂದ ಭಾಗವಹಿಸಲು ಅನುಮತಿ ನೀಡಿರುವ ಪತ್ರವನ್ನು ಕಡ್ಡಾಯವಾಗಿ ತರಬೇಕು. ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.