ಮಾದಾಪುರ ರಸ್ತೆ ಗುಂಡಿ ಮುಚ್ಚಿ ಸಾರ್ವಜನಿಕರ ಮೆಚ್ಚುಗೆ ಗಳಿಸಿದ ಕರವೇ ಸ್ವಾಭಿಮಾನಿ ಸೇನೆ ಕಾರ್ಯಕರ್ತರು

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಕೊಡಗು ಜಿಲ್ಲೆಯ ಸುಂಟಿಕೊಪ್ಪ ಹೋಬಳಿ ಘಟಕದ ಉದ್ಘಾಟನೆ ಮತ್ತು ನೂತನ ಸದಸ್ಯರ ಸೇರ್ಪಡೆ ಕಾರ್ಯಕ್ರಮವು ಇತ್ತೀಚೆಗೆ ಅತ್ಯಂತ ಯಶಸ್ವಿಯಾಗಿ ಜರುಗಿತು.
ಕುಶಾಲನಗರ ತಾಲೂಕು ಅಧ್ಯಕ್ಷರಾದ ಶಿವು ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ ಹಲವು ಯುವಕರು ಸಂಘಟನೆಗೆ ಅಧಿಕೃತವಾಗಿ ಸೇರ್ಪಡೆಗೊಂಡರು. ಕರವೇ ಸ್ವಾಭಿಮಾನಿ ಸೇನೆಯ ಜಿಲ್ಲಾ ಉಪಾಧ್ಯಕ್ಷರಾದ ರಾಜಶೇಖರ್ ಗೌಡ ವಿ. ಎಸ್., ರಾಜ್ಯೋತ್ಸವ ಕಾರ್ಯಕ್ರಮದ ಖಜಾಂಜಿ ಅಂತೋನಿ, ಹಿರಿಯ ಸದಸ್ಯರಾದ ಕೆ. ಆರ್. ನಂಜಪ್ಪ ಮತ್ತು ವಿಲ್ಸನ್ ಹಾಗೂ ಸುಂಟಿಕೊಪ್ಪ ಹೋಬಳಿ ಯುವ ಘಟಕದ ಅಧ್ಯಕ್ಷರಾದ ಕ್ಲಿಫರ್ಡ್ ರೊಡ್ರಿಗಸ್ ಇವರ ಸಹಕಾರ ಮತ್ತು ನೇತೃತ್ವದಲ್ಲಿ ಈ ಸೇರ್ಪಡೆ ಕಾರ್ಯಕ್ರಮವು ಉದ್ಘಾಟನೆಗೊಂಡಿತು.

ಇದೇ ಸಂದರ್ಭದಲ್ಲಿ ಸುಂಟಿಕೊಪ್ಪ ಹೋಬಳಿ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು:
ಅಧ್ಯಕ್ಷರು: ಶರೀಫ್ ಎಂ. ಇ.
ಉಪಾಧ್ಯಕ್ಷರು: ಶಹಾದ್ ವಿ. ಎ.
ಸಂಘಟನೆಗೆ ಸೇರಿದ ನೂತನ ಸದಸ್ಯರು : ನಿತಿನ್ ಮಂದಣ್ಣ, ನಿತಿನ್ ಎನ್. ಎಸ್., ನವೀನ್, ಸಂಜಯ್ ಹೋಬಳಿ, ರೋಷನ್, ಸಾಧಿಕ್, ಸಮೀರ್, ಸಿದ್ದೀಕ್, ನಾಸೀರ್, ಕರ್ಣ, ರಾಜೇಶ್ ಮತ್ತು ಹುಸೇನ್ ಅವರುಗಳು ಕರವೇ ಸ್ವಾಭಿಮಾನಿ ಸೇನೆಗೆ ಅಧಿಕೃತವಾಗಿ ಸೇರ್ಪಡೆಯಾದರು. ಗಣ್ಯರು ಹೊಸ ಸದಸ್ಯರನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಉಪಾಧ್ಯಕ್ಷ ರಾಜಶೇಖರ್ ಗೌಡ ಅವರು, “ನಮ್ಮ ಸಂಘಟನೆಗೆ ಇಷ್ಟೊಂದು ಸಂಖ್ಯೆಯಲ್ಲಿ ಯುವಕರು ಸೇರ್ಪಡೆಯಾಗಿರುವುದು ಸಂತೋಷ ತಂದಿದೆ. ಸಮಾಜದಲ್ಲಿ ಉತ್ತಮ ಕೆಲಸಗಳನ್ನು ಮಾಡುವ ಮೂಲಕ ಒಳ್ಳೆಯ ಹೆಸರು ಗಳಿಸಬೇಕು. ಸಂಘಟನೆ ಬೆಳೆದರೆ ನಿಮ್ಮೆಲ್ಲರ ಬೆಳವಣಿಗೆಯೂ ಸಾಧ್ಯವಾಗುತ್ತದೆ” ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕುಶಾಲನಗರ ತಾಲೂಕು ಅಧ್ಯಕ್ಷ ಶಿವು ಮಾತನಾಡಿ, “ಒಗ್ಗಟ್ಟಿನಲ್ಲಿ ಬಲವಿದೆ. ನಾವೆಲ್ಲರೂ ಒಟ್ಟಾಗಿ ಉತ್ತಮ ಸಮಾಜಮುಖಿ ಕೆಲಸಗಳನ್ನು ಮಾಡಬೇಕಿದೆ. ಸಂಘಟನೆಗೆ ದೊಡ್ಡ ಶಕ್ತಿಯಿದ್ದು, ಎಲ್ಲಿ ಅನ್ಯಾಯವಾಗುತ್ತದೆಯೋ ಅಲ್ಲಿ ನಮ್ಮ ಸಂಘಟನೆ ಮುಂಚೂಣಿಯಲ್ಲಿ ನಿಂತು ಹೋರಾಡುತ್ತದೆ. ಸಾರ್ವಜನಿಕರ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡೋಣ” ಎಂದು ಕರೆ ನೀಡಿದರು.
ಘಟಕದ ಉದ್ಘಾಟನೆ ಮತ್ತು ಸೇರ್ಪಡೆ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ನೂತನ ಪದಾಧಿಕಾರಿಗಳು ಹಾಗೂ ನೂತನ ಸದಸ್ಯರೆಲ್ಲರೂ ಸೇರಿ ತಕ್ಷಣವೇ ಸಮಾಜಮುಖಿ ಕಾರ್ಯಕ್ಕೆ ಮುಂದಾದರು. ಸುಂಟಿಕೊಪ್ಪದಿಂದ ಮಾದಾಪುರಕ್ಕೆ ಹೋಗುವ ಮುಖ್ಯ ರಸ್ತೆಯುದ್ದಕ್ಕೂ ಇದ್ದ ಅಪಾಯಕಾರಿ ಬೃಹತ್ ರಸ್ತೆ ಗುಂಡಿಗಳನ್ನು ಕಾರ್ಯಕರ್ತರು ಸ್ವತಃ ಶ್ರಮದಾನದ ಮೂಲಕ ಮುಚ್ಚಿ ಸರಿಪಡಿಸಿದರು. ಸಂಘಟನೆಗೆ ಸೇರಿದ ಮೊದಲ ದಿನವೇ ಇಂತಹ ಜನಪರ ಹಾಗೂ ಸಾರ್ವಜನಿಕ ಸ್ನೇಹಿ ಕೆಲಸಕ್ಕೆ ಕೈಹಾಕಿದ ಕರವೇ ಸ್ವಾಭಿಮಾನಿ ಸೇನೆಯ ಕಾರ್ಯಕರ್ತರ ಈ ನಡೆಯನ್ನು ಕಂಡು ಸಾರ್ವಜನಿಕರು ಮತ್ತು ವಾಹನ ಸವಾರರು ವ್ಯಾಪಕವಾಗಿ ಶ್ಲಾಘಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
