ಶಿಕ್ಷಕಿ ಶೋಭಾ ಸುರೇಶ್ ಅವರಿಗೆ ‘ಅಬ್ಬಕ್ಕ ಪ್ರೇರಣಾ’ ಗೌರವ

0
41

ಮೂಡುಬಿದಿರೆ : ವೀರರಾಣಿ ಅಬ್ಬಕ್ಕ ಅವರ 500ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ‘ಜವನೆರ್ ಬೆದ್ರ’ ಸಂಘಟನೆಯು ನೀಡುವ ಪ್ರತಿಷ್ಠಿತ ‘ಅಬ್ಬಕ್ಕ ಪ್ರೇರಣಾ’ ಗೌರವಕ್ಕೆ ಮೂಡುಬಿದಿರೆಯ ದಿಗಂಬರ ಜೈನ ಡಿ.ಜೆ. ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಶೋಭಾ ಸುರೇಶ್ ಅವರು ಆಯ್ಕೆಯಾಗಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ ‘ಅಬ್ಬಕ್ಕ ಪ್ರೇರಣಾ ಪತ್ರ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ. ಶೋಭಾ ಸುರೇಶ್ ಅವರು ಸಾಹಿತ್ಯದ ಜೊತೆಗೆ ಶಿಕ್ಷಣ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿರುವ ವ್ಯಕ್ತಿತ್ವವಾಗಿದ್ದಾರೆ.

ತುಳು ಭಾಷೆ ಮತ್ತು ಸಂಸ್ಕೃತಿಯ ಮೇಲಿನ ವಿಶೇಷ ಆಸಕ್ತಿಯಿಂದ ತುಳು ಲಿಪಿಯನ್ನು ಕಲಿತು ಅದೇ ಲಿಪಿಯಲ್ಲಿ ಲೇಖನಗಳನ್ನು ರಚಿಸುವ ಮೂಲಕ ಅವರು ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ವಿವಿಧ ವೇದಿಕೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಜ್ಞಾನದಾನ ಮಾಡುತ್ತಾ ಬಂದಿದ್ದಾರೆ. ಶಿಕ್ಷಕರಿಗಾಗಿ ಆಯೋಜಿಸಲಾದ ಪ್ರತಿಭಾ ಸ್ಪರ್ಧೆಗಳ ಚಿತ್ರಕಲೆ ಹಾಗೂ ಚಿತ್ರಕವನ ವಿಭಾಗಗಳಲ್ಲಿ ರಾಜ್ಯ ಮತ್ತು ತಾಲೂಕು ಮಟ್ಟದ ಅನೇಕ ಪ್ರಶಸ್ತಿಗಳನ್ನು ಅವರು ಮುಡಿಗೇರಿಸಿಕೊಂಡಿದ್ದಾರೆ.

ಶಾಲಾ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಾರ್ಗದರ್ಶನ ನೀಡುವ ಜೊತೆಗೆ, ಕಲಿಕೆಯಲ್ಲಿ ಹಿಂದುಳಿದ ಹಾಗೂ ವೈಯಕ್ತಿಕ ಕಾರಣಗಳಿಂದ ಶಾಲೆಯಿಂದ ಹೊರಗುಳಿದಿದ್ದ ಮಕ್ಕಳಿಗೆ ಉಚಿತ ಮನೆಪಾಠ ನೀಡಿ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗುವಂತೆ ಪ್ರೇರೇಪಿಸಿರುವುದು ಅವರ ಸಾಮಾಜಿಕ ಬದ್ಧತೆಯ ಪ್ರತಿಬಿಂಬವಾಗಿದೆ. ಈ ಮೂಲಕ ಅನೇಕ ವಿದ್ಯಾರ್ಥಿಗಳಿಗೆ ಕಾಲೇಜು ಶಿಕ್ಷಣದತ್ತ ಸಾಗಲು ದಾರಿದೀಪರಾಗಿದ್ದಾರೆ.

ಧಾರ್ಮಿಕ ಮತ್ತು ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿಯೂ ಶೋಭಾ ಸುರೇಶ್ ಅವರು ಗಮನಾರ್ಹ ಪಾತ್ರ ವಹಿಸಿದ್ದಾರೆ. ಸ್ವರ್ಣಗೌರಿ ಮಾತೃ ಮಂಡಳಿಯ ಮಾಜಿ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿರುವುದರೊಂದಿಗೆ, ಯುವವಾಹಿನಿ ಮೂಡುಬಿದಿರೆ ಘಟಕದ ಮಾಜಿ ಕೋಶಾಧಿಕಾರಿಯಾಗಿ ಜವಾಬ್ದಾರಿ ನಿಭಾಯಿಸಿದ್ದಾರೆ.

ಸಮಾಜಸೇವೆ, ಶಿಕ್ಷಣ ಮತ್ತು ಸಾಹಿತ್ಯ ಕೃಷಿಯಲ್ಲಿ ಅವರ ಬಹುಮುಖ ಸಾಧನೆಯನ್ನು ಪರಿಗಣಿಸಿ ‘ಜವನೆರ್ ಬೆದ್ರ’ ಸಂಘಟನೆಯು ‘ಅಬ್ಬಕ್ಕ ಪ್ರೇರಣಾ’ ಗೌರವ ನೀಡಿ ಸನ್ಮಾನಿಸುತ್ತಿದೆ ಎಂದು ಸಂಘಟನೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here