ಮೂಡುಮರ್ನಾಡು ಪ್ರೌಢಶಾಲೆಯಲ್ಲಿ ಶಿಕ್ಷಕರ ಬೀಳ್ಕೊಡುಗೆ ಕಾರ್ಯಕ್ರಮ

0
72

ಮೂಡುಮರ್ನಾಡು : ಮೂಡುಮರ್ನಾಡು ಪಿ.ಎಂ.ಶ್ರೀ ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಇತ್ತೀಚೆಗೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳಾಗಿ ಪದೋನ್ನತಿ ಹೊಂದಿರುವ ನವೀನ್ ಆರ್. ಪುತ್ರನ್ ಅವರನ್ನು ಶಾಲಾ ಎಸ್‌ಡಿಎಂಸಿ ಹಾಗೂ ಊರವರ ಪರವಾಗಿ ಬೀಳ್ಕೊಡುವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಭಾಸ್ಕರ್ ಎಸ್. ಕೋಟ್ಯಾನ್ ಅವರು ನವೀನ್ ಆರ್. ಪುತ್ರನ್ ಅವರನ್ನು ಶಾಲು, ಹಾರ ಹಾಗೂ ಫಲಪುಷ್ಪಗಳೊಂದಿಗೆ ಸನ್ಮಾನಿಸಿದರು. ಶಾಲೆಯಲ್ಲಿ ಅವರು ಸಲ್ಲಿಸಿದ ಅಮೂಲ್ಯ ಸೇವೆಯನ್ನು ಸ್ಮರಿಸಿದ ಅವರು, ನವೀನ್ ಪುತ್ರನ್ ಅವರ ಮುಂದಿನ ವೃತ್ತಿ ಜೀವನಕ್ಕೆ ಶುಭ ಹಾರೈಸಿದರು.

ಸಮಾಜ ವಿಜ್ಞಾನ ಶಿಕ್ಷಕ ಜೋನ್ ರೊನಾಲ್ಡ್ ಡಿಸೋಜ ಅಭಿನಂದನಾ ಮಾತುಗಳನ್ನಾಡಿದರು. ಮೂಡುಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಎಸ್. ವಿರೂಪಾಕ್ಷಪ್ಪ, ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ರಾಜಶ್ರೀ ಬಿ., ತಾಲೂಕು ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ನಾಗೇಶ್, ಮೆಲ್ವಿನ್ ಅಲ್ಬುರ್ಕ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್, ಎಸ್‌ಡಿಎಂಸಿ ಸದಸ್ಯರಾದ ಅಶೋಕ್ ಹಾಗೂ ಸುಶೀಲಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ಸುಜಾತ ಕುಮಾರಿ ಶೆಟ್ಟಿ ಸ್ವಾಗತಿಸಿದರು. ಹಿಂದಿ ಶಿಕ್ಷಕಿ ಬಾಬಿ ವಂದನಾರ್ಪಣೆಗೈದರು. ಗಣಿತ ಶಿಕ್ಷಕಿ ಸುಮಿತಾ ಕಾರ್ಯಕ್ರಮ ನಿರ್ವಹಿಸಿದರು.