‘ಹೊಡೆದು ಪಾಠ ಕಲಿಸುವುದು ಅಕ್ಷಮ್ಯ’ – ಕರ್ನಾಟಕ ಹೈಕೋರ್ಟ್‌ ಕಠಿಣ ನಿಲುವು

0
47

ಬೆಂಗಳೂರು : ಶಾಲೆಗಳಲ್ಲಿ ಮಕ್ಕಳಿಗೆ ದೈಹಿಕ ಶಿಕ್ಷೆ ನೀಡುವ ಪ್ರವೃತ್ತಿಯನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಕಟುವಾಗಿ ಅಭಿಪ್ರಾಯಪಟ್ಟಿದೆ. ಯುಕೇಜಿ ವಿದ್ಯಾರ್ಥಿನಿಗೆ ಕೋಲಿನಿಂದ ಹೊಡೆದ ಆರೋಪಕ್ಕೆ ಸಂಬಂಧಿಸಿದಂತೆ ಶಿಕ್ಷಕಿಯೊಬ್ಬರ ವಿರುದ್ಧ ಅಧೀನ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ತಡೆಯಾಜ್ಞೆ ನೀಡಲು ಹೈಕೋರ್ಟ್‌ ಸ್ಪಷ್ಟವಾಗಿ ನಿರಾಕರಿಸಿದೆ.

ಮಂಗಳೂರಿನ 2ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಸುರತ್ಕಲ್‌ನ ಹೋಲಿ ಫ್ಯಾಮಿಲಿ ಶಾಲೆಯ ಶಿಕ್ಷಕಿ ಆಶಾ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ನಡೆಸಿತು.

ವಿಚಾರಣೆ ವೇಳೆ ನ್ಯಾಯಪೀಠ, “ಆ ಪುಟ್ಟ ಮಗುವನ್ನು ಶಿಕ್ಷಕಿ ಯಾಕೆ ಹೊಡೆದರು?” ಎಂದು ಪ್ರಶ್ನಿಸಿತು. ಇದಕ್ಕೆ ಶಿಕ್ಷಕಿಯ ಪರ ವಕೀಲರು, “ಮಗುವಿಗೆ ಹೊಡೆದಿಲ್ಲ” ಎಂದು ವಾದ ಮಂಡಿಸಲು ಯತ್ನಿಸಿದರು.

ಈ ವೇಳೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, “ಶಿಕ್ಷಕರು ಮಕ್ಕಳಿಗೆ ಹೊಡೆದು ಪಾಠ ಕಲಿಸುವ ಯಾವುದೇ ಅಗತ್ಯವಿಲ್ಲ. ಇಂತಹ ಧೋರಣೆ ಮತ್ತು ನಡವಳಿಕೆಯನ್ನು ನ್ಯಾಯಾಲಯ ಎಂದಿಗೂ ಸಹಿಸುವುದಿಲ್ಲ” ಎಂದು ಕಟುವಾಗಿ ಹೇಳಿ, ಅಧೀನ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿತು.

ಈ ಆದೇಶದ ಮೂಲಕ ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಶಾಲೆಗಳಲ್ಲಿ ದೈಹಿಕ ಶಿಕ್ಷೆಗೆ ಅವಕಾಶವಿಲ್ಲ ಎಂಬ ಸಂದೇಶವನ್ನು ಹೈಕೋರ್ಟ್‌ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

LEAVE A REPLY

Please enter your comment!
Please enter your name here