ಕನ್ನಡ ಕಿರುತೆರೆಯಲ್ಲಿ ನಟಿಸಿ ಫೇಸಮ್ ಆಗಿದ್ದ ನಟ ಶ್ರೀಧರ್ ನಾಯಕ್ ಅವರು ಮೇ 26ರ ರಾತ್ರಿ ನಿಧನ ಹೊಂದಿದ್ದಾರೆ. ಇತ್ತೀಚೆಗೆ ಅವರಿಗೆ ತೀವ್ರ ಅನಾರೋಗ್ಯ ಕಾಡಿತ್ತು. ಅವರಿಗೆ ಸಹಾಯ ಮಾಡುವಂತೆ ಅನೇಕರು ಕೋರಿಕೊಂಡಿದ್ದರು. ಅವರು ಗುರುತೇ ಸಿಗದಷ್ಟು ಬದಲಾಗಿ ಬೆಡ್ ಮೇಲೆ ಮಲಗಿದ್ದು ನೋಡಿ ಹಲವರಿಗೆ ಶಾಕ್ ಆಗಿತ್ತು. ಈಗ ಶ್ರೀಧರ್ ಅವರು ಚಿಕಿತ್ಸೆ ಫಲಕಾರಿ ಆಗದೆ ಕೊನೆಯುಸಿರು ಎಳೆದಿದ್ದಾರೆ. ಬೆಂಗಳೂರಿನ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಅವರ ಕಳೆಬರವನ್ನು ಇಡಲಾಗಿದೆ. ಅವರಿಗೆ 47 ವರ್ಷ ವಯಸ್ಸಾಗಿತ್ತು.
ಶ್ರೀಧರ್ ಅವರಿಗೆ ಅನಾರೋಗ್ಯ ಉಂಟಾದ ವಿಚಾರದ ಬಗ್ಗೆ ಏಪ್ರಿಲ್ನಲ್ಲಿ ಸುದ್ದಿ ಬಿತ್ತರ ಆಯಿತು. ವಿಚಿತ್ರ ಸೋಂಕಿನಿಂದ ಅವರು ಈ ರೀತಿ ಆಗಿದ್ದರು. ಗುರುತು ಸಿಗದಷ್ಟು ಬದಲಾಗಿ ಅವರು ಆಸ್ಪತ್ರೆಯ ಬೆಡ್ ಮೇಲೆ ಮಲಗಿರೋದು ಕಂಡು ಬಂದಿತ್ತು. ಇದನ್ನು ನೋಡಿ ಅಭಿಮಾನಿಗಳಿಗೆ ನಿಜಕ್ಕೂ ಶಾಕ್ ಆಗಿತ್ತು. ಅವರು ಚೇತರಿಕೆ ಕಾಣಲಿ ಎಂದು ಪ್ರಾರ್ಥಿಸಿದ್ದರು.
ಇತ್ತೀಚೆಗೆ ಶ್ರೀಧರ್ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಹೀಗಾಗಿ, ಅವರು ಸಹಾಯ ಕೋರಿದ್ದರು. ಅನೇಕರು ಹಣದ ಸಹಾಯ ಕೂಡ ಮಾಡಿದ್ದರು. ಆದರೆ, ಚಿಕಿತ್ಸೆ ಫಲಕಾರಿ ಆಗಲಿಲ್ಲ. ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.