ಕಾಪು: 2028ರಲ್ಲಿ ಶತಮಾನೋತ್ಸವ ಆಚರಿಸಲಿರುವ ಐತಿಹಾಸಿಕ ತುಳುವ ಮಹಾಸಭೆಯ ಜಾಗತಿಕ ಸಂಘಟನೆಯಾದ ತುಳುವ ಮಹಾಸಭೆ ಇಂಟರ್ನ್ಯಾಷನಲ್ ವತಿಯಿಂದ ಕಾಪು ವಲಯ ಸಂಚಾಲಕರಾಗಿ ಡಾ| ನಿರಂಜನ್ ಎಸ್ ಶೆಟ್ಟಿ ಅವರನ್ನು ಮರು ನೇಮಕ ಮಾಡಲಾಗಿದೆ. ಆಯುರ್ವೇದ, ಯೋಗ, ಸಮತೋಲಿತ ಆಹಾರ ಹಾಗೂ ಮನಃಶಾಂತಿ ಆಧಾರಿತ ಸಮಗ್ರ ಆರೋಗ್ಯ ಸೇವೆಯಲ್ಲಿ ಗುರುತಿಸಿಕೊಂಡಿರುವ ಡಾ| ನಿರಂಜನ್ ಎಸ್ ಶೆಟ್ಟಿ ಅವರು ಸುನಂದ ವೆಲ್‌ನೆಸ್ ಸೆಂಟರ್ ನ ಸಂಸ್ಥಾಪಕರಾಗಿದ್ದು, ಔಷಧರಹಿತ ಚಿಕಿತ್ಸಾ ವಿಧಾನಗಳ ಮೂಲಕ ನೂರಾರು ಜನರ ಆರೋಗ್ಯ ಸುಧಾರಣೆಗೆ ಸೇವೆ ಸಲ್ಲಿಸುತ್ತಿದ್ದಾರೆ. ಮನೋವಿಜ್ಞಾನದಲ್ಲಿ ಡಾಕ್ಟರೇಟ್ ಪದವಿ ಪಡೆದಿರುವ ಅವರು ರಾಷ್ಟ್ರೀಯ ಮಾನವ ಹಕ್ಕು ಸಮಿತಿ ಹಾಗೂ ಮಹಿಳಾ ಮಕ್ಕಳ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಮೆರಿಕದ ಲಿಂರಾ ವಿಂಡ್ಸರ್ ಸುವರ್ಣ ಪದಕ ಹಾಗೂ ಸಿಂಗಾಪುರದ ಚಾಂಪಿಯನ್ ಆಫ್ ಚಾಂಪಿಯನ್ಸ್ ಸಿಇಓ ಅವಾರ್ಡ್ ಸೇರಿದಂತೆ ಹಲವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

