ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಉಡುಪಿ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಇತಿಹಾಸ ಅಧ್ಯಾಪಕರ ಸಂಘದ ಸಹಯೋಗದೊಂದಿಗೆ ‘ಇತಿಹಾಸದ ಪುಟದಲ್ಲಿ ಆಳುಪರು’ ಎಂಬ ವಿಷಯದಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣ ಆ.6 ರಂದು ನಡೆಯಲಿದೆ.
ಬೆಳಿಗ್ಗೆ 9.30 ಗಂಟೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರು ವಿಚಾರ ಸಂಕಿರಣ ಉದ್ಘಾಟಿಸುವರು. ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ.ಚಂದ್ರಕಾಂತ್ ಭಟ್ ಅಧ್ಯಕ್ಷತೆ ವಹಿಸುವರು.
ಉದ್ಘಾಟನಾ ಕಾರ‍್ಯಕ್ರಮದ ಬಳಿಕ ‘ಉದ್ಯಾವರದ ಐತಿಹಾಸಿಕ ಹಿನ್ನೆಲೆ’ ವಿಷಯದ ಕುರಿತು ರಾಷ್ಟ್ರ ಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ನಿರ‍್ದೇಶಕರಾದ ಡಾ.ಬಿ.ಜಗದೀಶ್ ಶೆಟ್ಟಿ ಅವರು ವಿಶೇಷ ಉಪನ್ಯಾಸ ನೀಡುವರು.
ವಿಚಾರ ಸಂಕಿರಣದ ಪ್ರಥಮ ಗೋಷ್ಠಿಯಲ್ಲಿ ‘ಆಳುಪರ ರಾಜಕೀಯ ಸಂಬಂಧಗಳು’ ಎಂಬ ವಿಷಯದ ಕುರಿತು ಶ್ರೀ ಧವಳಾ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ನಿವೃತ್ತ ಪಾಧ್ಯಾಪಕರಾದ ಡಾ.ಪುಂಡಿಕಾಯಿ ಗಣಪಯ್ಯ ಭಟ್ ಅವರು ಉಪನ್ಯಾಸ ನೀಡುವರು, ಎರಡನೇ ಗೋಷ್ಠಿಯಲ್ಲಿ ‘ಆಳುಪರ ಕಾಲದ ಬಾರಕೂರು’ ಎಂಬ ವಿಷಯದ ಕುರಿತು ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ನಿವೃತ್ತ ಇತಿಹಾಸ ಉಪನ್ಯಾಸಕ ಪ್ರೊ. ಜಯರಾಮ್ ಶೆಟ್ಟಿಗಾರ್ ಅವರು ಉಪನ್ಯಾಸ ನೀಡುವರು.
ಮೂರನೇ ಗೋಷ್ಠಿಯಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ‘ಉದ್ಯಾವರದ ಬಹು ದೇವತಾರಾಧನಾ ನೆಲೆಗಳು’ ಎಂಬ ವಿಷಯದ ಕುರಿತು ವಿಚಾರ ಮಂಡಿಸಲಿದ್ದಾರೆ ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ.

