ತೀರ್ಥಯಾತ್ರೆಗೆ ಹೋಗಿದ್ದಾರೆಂದು ಸುಳ್ಳು, ಅರಣ್ಯದಲ್ಲಿ ಮೃತದೇಹಗಳು! 7 ಕೊಲೆಗಳ ಹಿಂದಿನ ಭಯಾನಕ ರಹಸ್ಯ

0
7

ಒಂದೇ ಕುಟುಂಬದ ಏಳು ಮಂದಿಯನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣದಲ್ಲಿ ದಿನದಿಂದ ದಿನಕ್ಕೆ ಆಘಾತಕಾರಿ ಸಂಗತಿಗಳು ಬೆಳಕಿಗೆ ಬರುತ್ತಿವೆ. ಆರೋಪಿ ಇಂದುಶೇಖರ್ ಕೊಲೆ ಮಾಡಿದ ಬಳಿಕ ಮೃತರ ಹೆಬ್ಬೆಟ್ಟು ಗುರುತುಗಳನ್ನು ಸ್ಟ್ಯಾಂಪ್ ಪೇಪರ್ ಮೇಲೆ ಒತ್ತಿಸಿಕೊಂಡಿದ್ದಾನೆ ಎಂಬ ಅಂಶ ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.ಈ ಘಟಣೆಯು ಬೆಂಗಳೂರಿನಲ್ಲಿ ಸಂಭವಿಸಿದೆ.

ಶ್ರೀರಾಮಪುರದಲ್ಲಿರುವ ಪತ್ನಿಯ ಕುಟುಂಬಕ್ಕೆ ಸೇರಿದ ಸುಮಾರು ₹2.5 ಕೋಟಿ ಮೌಲ್ಯದ ಆಸ್ತಿಯನ್ನು ಕಬಳಿಸುವ ಉದ್ದೇಶದಿಂದ ಆರೋಪಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಇದೇ ಆಸ್ತಿ ವಿಚಾರವಾಗಿ ಕಳೆದ ಹಲವು ವರ್ಷಗಳಿಂದ ಪತ್ನಿ ಮತ್ತು ಆರೋಪಿಯ ನಡುವೆ ಗಲಾಟೆ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.

ಕೊಲೆಗೂ ಮೊದಲೇ ಸಿದ್ಧತೆ ಮಾಡಿಕೊಂಡಿದ್ದ ಹಂತಕ!

ಆಸ್ತಿ ತನ್ನ ಹೆಸರಿಗೆ ಮಾಡಿಸಿಕೊಳ್ಳುವ ಉದ್ದೇಶದಿಂದ ಕೊಲೆಗೂ ಮೊದಲೇ ಸ್ಟ್ಯಾಂಪ್ ಪೇಪರ್‌ಗಳನ್ನು ತಂದಿಟ್ಟುಕೊಂಡಿದ್ದ ಆರೋಪಿ, ಪತ್ನಿ ಸುನೀತಾ, ಅತ್ತೆ ರೂಪಾವತಿ, ಬಾಮೈದರಾದ ಶಿವಕುಮಾರ್ ಮತ್ತು ಶಂಕರ್ ಹಾಗೂ ನಾದಿನಿಯರಾದ ದಿವ್ಯಾ ಮತ್ತು ನಳಿನಿ ಅವರನ್ನು ಒಬ್ಬೊಬ್ಬರಾಗಿ ಹತ್ಯೆಗೈದಿದ್ದಾನೆ ಎನ್ನಲಾಗಿದೆ.

ಬಳಿಕ ಮೃತರ ಹೆಬ್ಬೆಟ್ಟು ಗುರುತುಗಳನ್ನು ಸ್ಟ್ಯಾಂಪ್ ಪೇಪರ್ ಮೇಲೆ ಒತ್ತಿಸಿಕೊಂಡಿದ್ದಾನೆ. ನಂತರ ಮೃತದೇಹಗಳನ್ನು ಗೋಣಿ ಚೀಲಗಳಲ್ಲಿ ತುಂಬಿ ತನ್ನ ಕಾರಿನಲ್ಲಿ ಸಾಗಿಸಿ ದಟ್ಟ ಅರಣ್ಯ ಪ್ರದೇಶದಲ್ಲಿ ಎಸೆದಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇತ್ತ ಸಂಬಂಧಿಕರಿಗೆ ಮೃತರು ತೀರ್ಥಯಾತ್ರೆಗೆ ತೆರಳಿದ್ದಾರೆ ಎಂದು ಸುಳ್ಳು ಮಾಹಿತಿ ನೀಡಿದ್ದ ಆರೋಪಿ, ಕೊಲೆ ಪ್ರಕರಣ ಹೊರಬಾರದಂತೆ ಸಂಚು ರೂಪಿಸಿದ್ದ ಎನ್ನಲಾಗಿದೆ. ಈ ಕೃತ್ಯದಲ್ಲಿ ತನ್ನ ಮಗಳ ಸಹಕಾರವನ್ನೂ ಪಡೆದಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಪತ್ನಿಯಿಂದ ಮಾನಸಿಕ ಕಿರುಕುಳ ಆರೋಪ!

ಪೊಲೀಸ್ ವಿಚಾರಣೆ ವೇಳೆ ಆರೋಪಿ, ಪತ್ನಿ ಸಣ್ಣಪುಟ್ಟ ವಿಚಾರಗಳಿಗೂ ನಿಂದಿಸುತ್ತಿದ್ದಳು ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದಳು ಎಂದು ಹೇಳಿಕೊಂಡಿದ್ದಾನೆ. ಅಲ್ಲದೆ, ಪತ್ನಿಯ ತಾಯಿ ಹಾಗೂ ಸಹೋದರರು ಆಕೆಯ ಪರವಾಗಿ ನಿಲ್ಲುತ್ತಿದ್ದರು. ತನ್ನ ಸಂಸಾರದಲ್ಲಿ ಅವರ ಹಸ್ತಕ್ಷೇಪ ಹೆಚ್ಚಾಗಿತ್ತು. ಇದೇ ಕಾರಣಕ್ಕೆ ಇಡೀ ಕುಟುಂಬವನ್ನು ಹತ್ಯೆಗೈದಿರುವುದಾಗಿ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.

ಇನ್ನೂ ಆಘಾತಕಾರಿ ಸಂಗತಿಯೆಂದರೆ, ಏಳು ಮಂದಿಯನ್ನು ಹತ್ಯೆಗೈದಿರುವುದಕ್ಕೆ ತನಗೆ ಯಾವುದೇ ಪಶ್ಚಾತ್ತಾಪವಿಲ್ಲ. ಬದಲಾಗಿ ಈಗ ಸಮಾಧಾನವಾಗಿದೆ ಎಂದು ಆರೋಪಿ ಹೇಳಿರುವುದು ತನಿಖಾಧಿಕಾರಿಗಳನ್ನೇ ಬೆಚ್ಚಿಬೀಳಿಸಿದೆ ಎಂದು ಮೂಲಗಳು ತಿಳಿಸಿವೆ.

ಆಸ್ತಿ ಆಸೆಗೆ ಪುತ್ರಿಯೂ ಸಾಥ್?

ಈ ಭೀಕರ ಕೃತ್ಯದಲ್ಲಿ ಸಹಕರಿಸಿರುವ ಆರೋಪದ ಮೇಲೆ ಪುತ್ರಿಯ ವಿಚಾರಣೆಯೂ ನಡೆಯುತ್ತಿದೆ. ತಂದೆ ಪತ್ನಿಯ ಕುಟುಂಬದ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದರಿಂದ ಸಹಕರಿಸಿರುವುದಾಗಿ ಪುತ್ರಿ ಹೇಳಿಕೆ ನೀಡಿದ್ದಾಳೆ ಎನ್ನಲಾಗಿದೆ.

ಕೊಲೆ, ಸಾಕ್ಷ್ಯ ನಾಶ ಹಾಗೂ ಮೃತದೇಹಗಳನ್ನು ಸಾಗಿಸುವ ಕಾರ್ಯದಲ್ಲೂ ಪುತ್ರಿ ನೆರವಾಗಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ಆಸ್ತಿಗಾಗಿ ಏಳು ಜೀವಗಳನ್ನೇ ಬಲಿಪಡೆದ ಈ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಘಾತ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.