ನಂಬಿಕೆ, ವಿಶ್ವಾಸದೊಂದಿಗೆ ಸಹಕಾರ ರಂಗ ಸುದೃಢವಾಗಿದೆ: ಕಾರ್ತಿಕ್ ಕುಮಾರ್

0
2

ಉಡುಪಿ; ರಾಷ್ಟ್ರೀಕೃತ ಬ್ಯಾಂಕುಗಳೊಂದಿಗೆ ಪೈಪೋಟಿ ನೀಡುತ್ತಿರುವ ಸಹಕಾರಿ ರಂಗವು ಇದೀಗ ನಂಬಿಕೆ ಮತ್ತು ವಿಶ್ವಾಸ ಗಳಿಸುವ ಮೂಲಕ ಸುದೃಢವಾಗಿ ಮುನ್ನಡೆಯುತ್ತಿವೆ. ಸ್ಥಳೀಯ ಭಾಷೆಯಲ್ಲಿನ ಸಂವಹನ ಹಾಗೂ ಸಿಬ್ಬಂದಿಯ ಆತ್ಮೀಯ ಸೇವೆ ಸಹಕಾರ ರಂಗದ ಬೆಳವಣಿಗೆಗೆ ಪೂರಕವಾಗಿದೆ. ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯೂ ಇದೇ ಹಾದಿಯಲ್ಲಿ ಮುನ್ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ನಾದಶ್ರೀ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಉಡುಪಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾರ್ತಿಕ್ ಕುಮಾರ್ ಆಶಿಸಿದರು.
ಅವರು ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ ಉಡುಪಿ ಶಾಖೆಯಲ್ಲಿ ಆಯೋಜಿಸಲಾಗಿದ್ದ ಸಹಕಾರ ಸಪ್ತಾಹ 2026ರ ಅಂಗವಾಗಿ ಹಿರಿಯ ಸಹಕಾರಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯುನೈಟೆಡ್ ಸರ್ಜಿಕಲ್ಸ್, ಉಡುಪಿಯ ಮಾಲಕರಾದ ಪ್ರಿಯಾಂಕ ಶೆಟ್ಟಿ ಮಾತನಾಡಿ, ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯು ಜನಸ್ನೇಹಿ ಸಂಸ್ಥೆಯಾಗಿದ್ದು, ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಾ ಸಹಕಾರ ಕ್ಷೇತ್ರದಲ್ಲಿ ಗುರುತಿಸಿಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಹಕಾರ ಕ್ಷೇತ್ರದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಹಿರಿಯ ಸಹಕಾರಿಗಳಾದ ಇನ್ನಂಜೆ ಸಹಕಾರಿ ವ್ಯವಸಾಯಿಕ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಧಾಕೃಷ್ಣ ರಾವ್, ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನಿವೃತ್ತ ಶಾಖಾ ವ್ಯವಸ್ಥಾಪಕಿ ನಯನ ಆಶಾಮಣಿ ಹಾಗೂ ಉಡುಪಿ ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರುಕಟ್ಟೆ ಸಂಘದ ನಿವೃತ್ತ ಸಿಬ್ಬಂದಿ ಸುಧಾಕರ್ ಡಿ. ಅಮೀನ್ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೊಸೈಟಿಯ ಅಧ್ಯಕ್ಷರಾದ ಸಹಕಾರ ರತ್ನ ಎಚ್. ವಸಂತ್ ಬೆರ್ನಾರ್ಡ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಖಾ ಪ್ರಬಂಧಕಿ ನಿಶಾ ಸುಹೈಲ್ ಡೇನಿಯಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಪೂಜಾರಿ ವಂದಿಸಿದರು. ಸಿಬ್ಬಂದಿಗಳಾದ ರಕ್ಷಿತಾ ಹಾಗೂ ಅಪೇಕ್ಷಾ ಅವರು ಸನ್ಮಾನ ಪತ್ರವನ್ನು ವಾಚಿಸಿದರು.
.