ಮುಂಬೈ : ಭಾರತೀಯ ಚಿತ್ರರಂಗದ ಹಿರಿಯ ಹಾಗೂ ಖ್ಯಾತ ಹಿನ್ನೆಲೆ ಗಾಯಕಿ ಸುಮನ್ ಕಲ್ಯಾಣ್‌ಪುರ್ ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಮೇ 31ರಂದು ಮುಂಬೈನ ಲೋಖಂಡ್‌ವಾಲಾದಲ್ಲಿರುವ ತಮ್ಮ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ಆರು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಸಂಗೀತ ಲೋಕದಲ್ಲಿ ತಮ್ಮ ಸುಮಧುರ ಕಂಠದ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದ ಸುಮನ್ ಕಲ್ಯಾಣ್‌ಪುರ್ ಅವರ ನಿಧನದಿಂದ ಸಂಗೀತ ಕ್ಷೇತ್ರ ಅಪರೂಪದ ಪ್ರತಿಭೆಯನ್ನು ಕಳೆದುಕೊಂಡಂತಾಗಿದೆ. ಅವರ ಅಗಲಿಕೆಗೆ ಚಿತ್ರರಂಗದ ಗಣ್ಯರು, ಸಂಗೀತ ಕ್ಷೇತ್ರದ ಕಲಾವಿದರು ಹಾಗೂ ಕೋಟ್ಯಂತರ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
ಬಾಂಗ್ಲಾದೇಶದ ಢಾಕಾದಲ್ಲಿ ಜನಿಸಿದ್ದ ಅವರು ಬಳಿಕ ಮುಂಬೈನಲ್ಲಿ ನೆಲೆಸಿದ್ದರು. ಹಿಂದಿ, ಮರಾಠಿ, ಕನ್ನಡ, ಬೆಂಗಾಲಿ ಹಾಗೂ ಒಡಿಯಾ ಸೇರಿದಂತೆ ಹಲವು ಭಾಷೆಗಳಲ್ಲಿ ಸಾವಿರಾರು ಗೀತೆಗಳನ್ನು ಹಾಡಿ ಸಂಗೀತಾಸಕ್ತರ ಮನಗೆದ್ದಿದ್ದರು. ತಮ್ಮ ಗಾಯನ ಸೇವೆಗಾಗಿ ಹಲವು ಪ್ರಶಸ್ತಿಗಳು ಹಾಗೂ ಗೌರವಗಳಿಗೆ ಪಾತ್ರರಾಗಿದ್ದರು.
ಕನ್ನಡ ಚಿತ್ರರಂಗದಲ್ಲಿಯೂ ಸುಮನ್ ಕಲ್ಯಾಣ್‌ಪುರ್ ತಮ್ಮ ವಿಶಿಷ್ಟ ಛಾಪು ಮೂಡಿಸಿದ್ದರು. ‘ಒಡನಾಡಿ ಬೇಕೆಂದು’, ‘ಹನಿ ಹನಿ ಹೀರಿ ತಣಿ ಹರೆಯ’ ಹಾಗೂ ‘ತಲ್ಲಣ ನೂರು ಬಗೆ’ ಮೊದಲಾದ ಹಾಡುಗಳ ಮೂಲಕ ಕನ್ನಡಿಗರ ಮನದಲ್ಲಿ ವಿಶೇಷ ಸ್ಥಾನ ಪಡೆದಿದ್ದರು.
ಹಿಂದಿ ಚಿತ್ರರಂಗದಲ್ಲಿ ‘ಆಜ್‌ಕಲ್ ತೆರೆ ಮೇರೆ ಪ್ಯಾರ್ ಕೆ ಚರ್ಚೇ’, ‘ನಾ ನಾ ಕರ್ತೆ ಪ್ಯಾರ್ ತುಮ್ಹೀ ಸೆ’, ‘ತುಮ್ನೆ ಪುಕಾರಾ ಔರ್ ಹಮ್ ಚಲೆ ಆಯೇ’ ಸೇರಿದಂತೆ ಅನೇಕ ಅಮರ ಗೀತೆಗಳಿಗೆ ಧ್ವನಿಯಾಗಿದ್ದ ಅವರು, ತಮ್ಮ ಮಧುರ ಗಾಯನದಿಂದ ಸಂಗೀತ ಪ್ರಿಯರ ಹೃದಯದಲ್ಲಿ ಸದಾ ಜೀವಂತವಾಗಿರಲಿದ್ದಾರೆ.
ಸಂಗೀತವನ್ನೇ ಜೀವನವಾಗಿಸಿಕೊಂಡಿದ್ದ ಸುಮನ್ ಕಲ್ಯಾಣ್‌ಪುರ್ ಅವರು ತಮ್ಮ ಕೊನೆಯ ದಿನಗಳಲ್ಲಿಯೂ ತಾವು ಹಾಡಿದ್ದ ಹಳೆಯ ಗೀತೆಗಳನ್ನು ಆಲಿಸುತ್ತಲೇ ಕಾಲ ಕಳೆದಿದ್ದರು ಎಂದು ವರದಿಯಾಗಿದೆ.

