ಕೊಲ್ಲೂರು ಗ್ರಾಮದ ಕಲ್ಯಾಣಿಗುಡ್ಡೆ ಕೊರಗ ಸಮುದಾಯದ ಗಂಗೆ ಕೊರಗರವರು ನಲ್ವತ್ತು ವರ್ಷಗಳಿಂದ ಸರ್ಕಾರಿ ಭೂಮಿಯಲ್ಲಿ ಎರಡು ಮಕ್ಕಳ ಜೊತೆ ವಾಸವಾಗಿರುವ ಮನೆಯನ್ನು ಏಕಾಏಕಿ ಯಾವುದೇ ಮಾಹಿತಿ ನೀಡದೆ ಅಕ್ರಮವಾಗಿ ಮನೆಗೆ ಒಳಗೆ ಪ್ರವೇಶಿಸಿ ಮನೆಯಲ್ಲಿದ್ದಂತಹ ದಿನಶಿ ಸಾಮಗ್ರಿಗಳನ್ನು ಎತ್ತಿ ಬಟ್ಟೆ ಬರೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಜೆಸಿಬಿ ತಂದು ವಾಸಿಸುವ ಮನೆಯನ್ನು ಕೊಲ್ಲೂರಿನ ಜಗದಾಂಬ ಟ್ರಸ್ಟನವರು ಕೆಡವಿದ್ದಾರೆ. ಸೂರಿಲ್ಲದೆ ಗಂಗಮ್ಮ ಕೊರಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಇದಕ್ಕೆ ಕಾರಣಕರ್ತರಾದವರಿಗೆ ಕಾನೂನು ಕ್ರಮ ಜರಗಿಸಬೇಕು. ಇಂದಿಗೆ ಎರಡು ದಿನ ಆದರೂ ಜಿಲ್ಲಾಡಳಿತ ಯಾವುದೇ ರೀತಿಯ ಕ್ರಮ ಕೈಗೊಳ್ಳದಿರುವುದು. ಸಂಶಯಕ್ಕೆ ಆಸ್ಪದವಾಗಿದೆ ಹಾಗೆ ಇದೀಗ ಮಳೆಗಾಲ ಆರಂಭವಾಗುವ ಸಮಯ ಸೂರಿಲ್ಲದೆ ಕುಟುಂಬವು ತುಂಬಾ ತೊಂದರೆ ಅನುಭವಿಸುತ್ತಿದೆ.
ಈ ಕೂಡಲೇ ಗಂಗೆಯವರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ – ಕೇರಳ ಮತ್ತು ದಲಿತ ಸಂಘರ್ಷ ಸಮಿತಿ ಭೀಮವಾದ ಉಡುಪಿ ಜಿಲ್ಲೆ ನೇತ್ರತ್ವದಲ್ಲಿ ಕೊಲ್ಲೂರು ಗ್ರಾಮ ಪಂಚಾಯತಿ ಎದುರು ಧರಣಿ ಸತ್ಯಾಗ್ರಹ ನಡೆಯಿತು.
ನಂತರ ಕೊಲ್ಲೂರು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹಾಗೂ ಪಂಚಾಯತ್ ಪಿಡಿಒಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಕೊರಗ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಸುಶೀಲ ನಾಡ, ಪುತ್ರನ್ ಹೆಬ್ರಿ, ಬೊಗ್ರ ಕೊಕ್ಕರ್ಣೆ, ಶೀನ ಇನ್ನ, ಕುಮಾರ ಕೆಂಜೂರು, ನರಸಿಂಹ ಪೆರ್ಡೂರು, ಲಲಿತ ಕೊಲ್ಲೂರು, ಸುಶೀಲ ಕೆಂಜೂರು, ಸುರೇಶ ಕಾಪು, ಶಶಿಕಲಾ ಮಣಿಗೇರಿ, ದಲಿತ ಸಂಘರ್ಷ ಸಮಿತಿಯ ಶ್ಯಾಮರಾಜ್ ಬಿರ್ತಿ, ಟಿ. ಮಂಜುನಾಥ ಗಿಳಿಯಾರು, ಕೆ. ಸಿ. ರಾಜು, ಕೆ. ಹರಿಶ್ಚಂದ್ರ, ಸಂದೀಪ್ ಮರವಂತೆ, ಶಿವರಾಜ್ ಬೈಂದೂರು, ಹಾಗೂ ಇನ್ನೂರಕ್ಕೂ ಅಧಿಕ ಮಂದಿ ಸಮುದಾಯ ಭಾಂದವರು ಉಪಸ್ಥಿತರಿದ್ದರು.