ಮೂರನೇ ಪತ್ನಿಯ ಕೊಲೆ ಮಾಡಿ ಬಸ್​ನಲ್ಲಿ ಲಗೇಜ್ ಎಂದು‌ ಕಳುಹಿಸಿ ತಲೆಮರೆಸಿಕೊಂಡಿದ್ದ ವೃದ್ಧ ಕೊನೆಗೂ ಅಂದರ್!

0
86

ಕೊಪ್ಪಳ: ಅಪರೂಪದಲ್ಲೇ ಅಪರೂಪದ ಅಪರಾಧ ಕೃತ್ಯವೊಂದಕ್ಕೆ ಕೊಪ್ಪಳ ಜಿಲ್ಲೆ ಸಾಕ್ಷಿಯಾಗಿದೆ. ವ್ಯಕ್ತಿಯೊಬ್ಬ ಇಳಿ ವಯಸ್ಸಿನಲ್ಲಿ ತನ್ನ ಮೂರನೇ ಹೆಂಡತಿಯನ್ನು ಹತ್ಯೆ ಮಾಡಿ ಮೃತದೇಹವನ್ನು ಲಗೇಜ್ ಎಂದು ಬಸ್ಸಿನಲ್ಲಿ ಕಳುಹಿಸಿ ಪರಾರಿಯಾಗಿದ್ದಲ್ಲದೆ, ತಲೆಮರೆಸಿಕೊಂಡು ಹಾಯಾಗಿದ್ದ! ಇದೀಗ ಕೃತ್ಯ ಎಸಗಿ ಮೂರು ವರ್ಷಗಳ ಬಳಿಕ ರಾಯಚೂರಿನಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆರು ತಿಂಗಳ ಹಿಂದೆ ಸ್ವಗ್ರಾಮಕ್ಕೆ ಬಂದಿದ್ದ ಹಂತಕನ ಜಾಡು ಹಿಡಿದು ಶೋಧ ನಡೆಸಿದ ಪೊಲೀಸರು, ಕೊನೆಗೂ ಆತನನ್ನು ಖೆಡ್ಡಾಕ್ಕೆ ಕೆಡವುವಲ್ಲಿ ಯಶಸ್ವಿಯಾಗಿದ್ದಾರೆ. ರಾಯಚೂರ ಜಿಲ್ಲೆಯ ಮಾನ್ವಿಯಲ್ಲಿ ಆರೋಪಿ 75 ವರ್ಷದ ಹುಸೇನಪ್ಪನನ್ನು ಬಂಧಿಸಲಾಗಿದೆ.

ಸರ್ಕಾರಿ ನೌಕರ ಎಂದು ಹೇಳಿಕೊಂಡು ಮೂರನೇ ಮದುವೆಯಾಗಿದ್ದ ಹುಸೇನಪ್ಪ
ಪ್ರಾಥಮಿಕ ಆರೋಗ್ಯ ‌ಕೇಂದ್ರದಲ್ಲಿ ಕಿರಿಯ ಸಹಾಯಕ ಅಧಿಕಾರಿಯಾಗಿದ್ದ ಹುಸೇನಪ್ಪನ ಮೊದಲ ಪತ್ನಿ ತೀರಿಕೊಂಡಿದ್ದರು. ಅದಾದ ನಂತರ ಆತ, ಎರಡನೇ ವಿವಾಹವಾಗಿದ್ದ. ಆಕೆ ಜಗಳವಾಡಿ ಪತಿಯನ್ನು ತೊರೆದು ಹೋಗಿದ್ದಳು. ನಂತರ, ಸರ್ಕಾರಿ ನೌಕರ ಎಂದು ಹೇಳಿಕೊಂಡು ಕೊಪ್ಪಳ ‌ತಾಲೂಕಿನ‌ ಇಂದರಗಿ ನಿವಾಸಿ ರೇಣುಕಮ್ಮರನ್ನು ಮೂರನೇ ಮದುವೆಯಾಗಿದ್ದ. ಮದುವೆಯಾದ ಬಳಿಕ ಗಂಗಾವತಿಯ‌ ಲಕ್ಷ್ಮೀ ಕ್ಯಾಂಪ್‌ನಲ್ಲಿ ಪತ್ನಿ ಜೊತೆ ವಾಸ ಮಾಡತಿದ್ದ.

ಹೆಂಡತಿಯನ್ನು ಕೊಚ್ಚಿ‌ ಕೊಲೆ ಮಾಡಿದ್ದ ಹುಸೇನಪ್ಪ
2002 ರಲ್ಲಿ ಹೆಂಡತಿಯನ್ನು ಕೊಚ್ಚಿ‌ ಕೊಲೆ ಮಾಡಿದ್ದ ಹುಸೇನಪ್ಪ, ಶವವನ್ನು ಲಗೇಜ್ ಎಂದು‌ ಕಂಪ್ಲಿ ಬಸ್​ನಲ್ಲಿ ಕಳುಹಿಸಿದ್ದ. ಆ ಬಳಿಕ ಪರಾರಿಯಾಗಿ ತಲೆಮರೆಸಿಕೊಂಡಿದ್ದ. ನಂತರ ದೂರು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು. ಆದರೆ, ಆರೋಪಿಯನ್ನು ಪತ್ತೆಹೆಚ್ಚಿ ಬಂಧಿಸಲು ಸಾಧ್ಯವಾಗಿರಲಿಲ್ಲ.

ಆರು ತಿಂಗಳ ಹಿಂದೆ ಆರೋಪಿ ಸ್ವಗ್ರಾಮ ಹಾಲದಾಳಕ್ಕೆ ಬಂದಿರುವ ಬಗ್ಗೆ ಪೊಲೀಸರಿಗೆ ಖಚಿತ ಸುಳಿವು ದೊರೆತಿತ್ತು. ಅದರ ಆಧಾರದಲ್ಲಿ ಪೊಲೀಸರು ಆರೋಪಿಯ ಜಾಡು ಹಿಡಿದಿದ್ದರು. ನಂತರ ಕಾರ್ಯಾಚರಣೆ ನಡೆಸಿದ ಗಂಗಾವತಿ ಪೊಲೀಸರು, ರಾಯಚೂರ ಜಿಲ್ಲೆಯ ಮಾನ್ವಿಯಲ್ಲಿ ಹುಸೇನಪ್ಪನನ್ನು ಬಂಧಿಸಿದ್ದಾರೆ. ಇದರೊಂದಿಗೆ, 3 ವರ್ಷ ಹಳೆಯ ಕೊಲೆ ಪ್ರಕರಣವೊಂದನ್ನು ಪೊಲೀಸರು ಬಯಲಿಗೆಳೆದಂತಾಗಿದೆ.

LEAVE A REPLY

Please enter your comment!
Please enter your name here