ಸ್ಪೇನ್ನ ಟೊಲೆಡೊ ನಗರದ ಸಮೀಪ ಎರಡು ಹೈಸ್ಪೀಡ್ ರೈಲುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 46 ಮಂದಿ ಮೃತಪಟ್ಟಿದ್ದು, 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಗಾಯಾಳುಗಳ ಸಂಖ್ಯೆ ಹಾಗೂ ಸಾವಿನ ನಿಖರ ಪ್ರಮಾಣದ ಕುರಿತು ಇನ್ನೂ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವೂ ವ್ಯಕ್ತವಾಗಿದೆ.
ಅಪಘಾತದ ತೀವ್ರತೆಯನ್ನು ತೋರಿಸುವ ವಿಡಿಯೊಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ರೈಲಿನ ಬೋಗಿಗಳು ಹಳಿ ತಪ್ಪಿ ಜಖಂಗೊಂಡಿರುವ ದೃಶ್ಯಗಳು ದುರಂತದ ಭೀಕರತೆಯನ್ನು ಬಿಂಬಿಸಿವೆ.
ಮ್ಯಾಡ್ರಿಡ್–ಅಂಡಲೂಸಿಯಾ ರೈಲು ಸಂಚಾರ ರದ್ದು
ಅಪಘಾತದ ಹಿನ್ನೆಲೆಯಲ್ಲಿ ರೈಲು ನಿರ್ವಾಹಕ ಸಂಸ್ಥೆ ‘ಅಡಿಫ್’ ಮ್ಯಾಡ್ರಿಡ್–ಅಂಡಲೂಸಿಯಾ ನಡುವಿನ ಪ್ರಮುಖ ಹೈಸ್ಪೀಡ್ ರೈಲು ಮಾರ್ಗದ ಸಂಚಾರವನ್ನು ಸ್ಥಗಿತಗೊಳಿಸಿದೆ. ಗಾಯಗೊಂಡ ಪ್ರಯಾಣಿಕರಿಗೆ ತುರ್ತು ಚಿಕಿತ್ಸೆ ಒದಗಿಸಲು ಸಮೀಪದ ಉರ್ಡಾ ಪಟ್ಟಣದ ಕ್ರೀಡಾಂಗಣವನ್ನು ತಾತ್ಕಾಲಿಕ ವೈದ್ಯಕೀಯ ಕೇಂದ್ರವಾಗಿ ಬಳಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
ದುರಂತದ ನಿಖರ ಕಾರಣ ತಿಳಿಯಲು ಸ್ಪೇನ್ ಸರ್ಕಾರ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ರಕ್ಷಣಾ ಕಾರ್ಯಾಚರಣೆ ಹಾಗೂ ಗಾಯಾಳುಗಳಿಗೆ ಚಿಕಿತ್ಸೆ ನೀಡುವ ಕಾರ್ಯಗಳಿಗೆ ಆದ್ಯತೆ ನೀಡಲಾಗಿದೆ.
ರೆನ್ಫೆ ಮತ್ತು ಐರಿಯೊ ರೈಲುಗಳ ನಡುವೆ ಡಿಕ್ಕಿ
ಸ್ಥಳೀಯ ಸಮಯದ ಪ್ರಕಾರ ಬೆಳಿಗ್ಗೆ 9 ಗಂಟೆಯ ನಂತರ ಈ ಅಪಘಾತ ಸಂಭವಿಸಿದೆ. ರೆನ್ಫೆ ಕಂಪನಿಯ ಎವಿಇ ಹೈಸ್ಪೀಡ್ ರೈಲು ಹಾಗೂ ಐರಿಯೊ ಕಂಪನಿಯ ರೈಲು ನಡುವೆ ಡಿಕ್ಕಿಯಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ, ರೈಲುಗಳ ಪೈಕಿ ಒಂದು ಮತ್ತೊಂದು ರೈಲಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದು, ಎರಡು ಬೋಗಿಗಳು ಹಳಿ ತಪ್ಪಿವೆ. ಅಪಘಾತವು ಟೊಲೆಡೊ ಪ್ರಾಂತ್ಯದ ಉರ್ಡಾ ಸಮೀಪದ ಮೋರಾ ಮತ್ತು ಆರ್ಗಾಜ್ ನಡುವಿನ ರೈಲು ಮಾರ್ಗದಲ್ಲಿ ಸಂಭವಿಸಿದೆ.
ರೈಲ್ವೆ ಅಧಿಕಾರಿಗಳು ಮತ್ತು ತುರ್ತು ಸೇವಾ ತಂಡಗಳು ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಮ್ಯಾಡ್ರಿಡ್ನಿಂದ ದಕ್ಷಿಣ ಸ್ಪೇನ್ನ ಅಂಡಲೂಸಿಯಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಹೈಸ್ಪೀಡ್ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ರೈಲು ಮೂಲಸೌಕರ್ಯ ನಿರ್ವಹಣಾ ಸಂಸ್ಥೆ ಅಡಿಫ್ ತಿಳಿಸಿದೆ.
ಅಪಘಾತದ ಕಾರಣ ಹಾಗೂ ಪ್ರಯಾಣಿಕರ ಸಾವಿನ ಮತ್ತು ಗಾಯಗಳ ನಿಖರ ಸಂಖ್ಯೆ ಕುರಿತು ತನಿಖೆ ಮತ್ತು ಮಾಹಿತಿ ಸಂಗ್ರಹ ಮುಂದುವರಿದಿದೆ. ಇತ್ತೀಚಿನ ಕೆಲವು ಸ್ಥಳೀಯ ವರದಿಗಳು ಸಾವಿನ ಸಂಖ್ಯೆ 46ಕ್ಕೆ ಏರಿರುವುದಾಗಿ ತಿಳಿಸಿವೆ.

