ಕವಿಯ ಮಣ್ಣಲ್ಲೇ ಬೆಳಗಿದ ಕಾವ್ಯಜ್ಯೋತಿ : ಮಂಗಳೂರಿನ ಕುಡುಪು ದೇವಸ್ಥಾನದಲ್ಲಿ ‘ಮಂದಾರ ರಾಮಾಯಣ’ ಗಮಕ ಸಪ್ತಾಹ ವೈಭವ

0
48

ಮಂಗಳೂರು : ಕಾವ್ಯ ಮತ್ತು ಕಲೆಯ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಗಿದ್ದ ಮಹಾಕವಿ ಮಂದಾರ ಕೇಶವ ಭಟ್ಟರ ‘ಮಂದಾರ ರಾಮಾಯಣ’ ತುಳು ಮಹಾಕಾವ್ಯದ ಗಮಕ ವಾಚನ-ವ್ಯಾಖ್ಯಾನ ಸಪ್ತಾಹವು ಅತ್ಯಂತ ವೈಭವದಿಂದ ಜರುಗಿ, ಸಂಪೂರ್ಣ ಯಶಸ್ವಿಗೊಂಡಿದೆ.

ಕವಿಯ ಹುಟ್ಟೂರಾದ ಮಂಗಳೂರಿನ ಪವಿತ್ರ ಕ್ಷೇತ್ರ ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದ ಪ್ರಾಂಗಣದಲ್ಲಿ ನಡೆದ ಈ ಏಳು ದಿನಗಳ ಸಾಂಸ್ಕೃತಿಕ ಹಬ್ಬವು ಕರಾವಳಿಯ ಜನಮನದಲ್ಲಿ ಗಮಕದ ಹೊಸ ಕಂಪನ್ನು ಪಸರಿಸಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಾಡಿನ ಖ್ಯಾತ ಗಮಕಿಗಳು ಹಾಗೂ ಅರ್ಥದಾರಿಗಳು ಮಂದಾರ ರಾಮಾಯಣದ ಭಕ್ತಿರಸವನ್ನು ಅದ್ಭುತವಾಗಿ ಅನಾವರಣಗೊಳಿಸಿದರು.

ಕಲಾವಿದರ ಸುಶ್ರಾವ್ಯ ಹಾಗೂ ಗಂಭೀರ ಗಮಕ ವಾಚನ ಮತ್ತು ಕಾವ್ಯದ ಆಳವಾದ ಗೂಢಾರ್ಥವನ್ನು ಬಿಚ್ಚಿಟ್ಟ ಪ್ರಬುದ್ಧ ವ್ಯಾಖ್ಯಾನವು ಶ್ರೋತೃಗಳನ್ನು ಮಂತ್ರಮುಗ್ಧರನ್ನಾಗಿಸಿತು. ಪ್ರತಿ ದಿನವೂ ನೂರಾರು ಸಾಹಿತ್ಯಾಸಕ್ತರು ಬಂದು ಕಾವ್ಯದ ಸುಧೆಯನ್ನು ಆಸ್ವಾದಿಸಿದರು.

ತ್ಯಾಜ್ಯ ದುರಂತದಿಂದ ಕವಿಯ ಪಾರಂಪರಿಕ ಮನೆ ಶಿಥಿಲಾವಸ್ಥೆಯಲ್ಲಿದ್ದರೂ, ಅವರದೇ ಮಣ್ಣಿನಲ್ಲಿ ಕಾವ್ಯದ ಜ್ಯೋತಿಯನ್ನು ಬೆಳಗಿಸುವ ಮೂಲಕ ಸಾಹಿತ್ಯಾಭಿಮಾನಿಗಳು ಕವಿಯ ಅಸ್ಮಿತೆಯನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ವ್ಯವಸ್ಥೆಯ ಅಣಕದ ನಡುವೆಯೂ ಕಾವ್ಯದ ಪರಿಮಳ ವಿಜಯಶಾಲಿಯಾಗಿದೆ. ತುಳು ಭಾಷೆಯ ಹೆಮ್ಮೆಯ ಮಹಾಕಾವ್ಯವನ್ನು ಮುಂದಿನ ಪೀಳಿಗೆಗೆ ದಾಟಿಸುವಲ್ಲಿ ಹಾಗೂ ಗಮಕ ಕಲೆಗೆ ಹೊಸ ಚೈತನ್ಯ ನೀಡುವಲ್ಲಿ ಈ ಸಪ್ತಾಹವು ಸಾಂಸ್ಕೃತಿಕ ಇತಿಹಾಸ ಸೃಷ್ಟಿಸಿದೆ.

LEAVE A REPLY

Please enter your comment!
Please enter your name here