ಪುತ್ತೂರು : ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗಾಗಿ ಪರಿಸರ ಜಾಗೃತಿ ಬಗ್ಗೆ ಅರಿವು ಮೂಡಿಸುವ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರಿನ ರಾಷ್ಟ್ರೀಯ-ಅಂತಾರಾಷ್ಟ್ರೀಯ ಖ್ಯಾತ ಕಲಾವಿದ ಹಾಗೂ ಪರಿಸರ ಶಾಸ್ತ್ರಜ್ಞ ದಿನೇಶ್ ಹೊಳ್ಳ ಭಾಗವಹಿಸಿದರು.
ಪಶ್ವಿಮ ಘಟ್ಟ ಗಳ ಉಳಿವಿನ ಮಹತ್ವ ವನ್ನು ತಿಳಿಸಿಕೊಡುತ್ತಾ ವ್ಯತ್ಯಸ್ತ ಅವಧಿಗಳಲ್ಲಿ ಪರಿಸರ ಸಂರಕ್ಷಣೆ , ಪರಿಸರ ಪ್ರೇಮ ಇವುಗಳ ಅಗತ್ಯತೆಯನ್ನು ಮನವರಿಕೆ ಮಾಡುತ್ತಾ, ಅರಣ್ಯ ನಾಶ, ಅನಿಯಂತ್ರಿತ ಪ್ರವಾಸೋದ್ಯಮ,ಗಣಿಗಾರಿಕೆ, ಜಲವಿದ್ಯುತ್ ಯೋಜನೆಗಳು ಮತ್ತು ಎತ್ತಿನಹೊಳೆ ಯೋಜನೆಯಂತಹ ಅಭಿವೃದ್ಧಿ ಕಾರ್ಯಗಳು ಪಶ್ಚಿಮ ಘಟ್ಟಗಳ ಪರಿಸರ ಸಮತೋಲನಕ್ಕೆ ಉಂಟುಮಾಡುವ ಅಪಾಯದ ಕುರಿತು ಎಚ್ಚರಿಕೆ ನೀಡಿದರು.

ಪಶ್ಚಿಮ ಘಟ್ಟಗಳನ್ನು ರಕ್ಷಿಸುವುದು ಎಂದರೆ ಕೇವಲ ಅರಣ್ಯಗಳನ್ನು ಉಳಿಸುವುದಲ್ಲ, ನದಿಗಳು, ಜೀವವೈವಿಧ್ಯ ಮತ್ತು ಭವಿಷ್ಯದ ಪೀಳಿಗೆಗಳ ಜೀವನವನ್ನು ರಕ್ಷಿಸುವುದು ಎಂಬ ಸಂದೇಶವನ್ನು ನೀಡಿದರು. ಇದರೊಂದಿಗೆ ಬರವಣಿಗೆಯನ್ನು ಸುಧಾರಿಸುವ ವಿನೂತನ ವಿಧಾನ, ರೇಖಾ ಚಿತ್ರಗಳನ್ನು ಬಿಡಿಸುವ ಹಾಗೂ ಅವುಗಳನ್ನು ಮುಖಪುಟ, ಗ್ರಾಫಿಕ್ಸ್ ಮುಂತಾದ ಕಡೆಗಳಲ್ಲಿ ಉಪಯೋಗಿಸುವುದರ ಕುರಿತ ಮಾಹಿತಿಗಳನ್ನು ನೀಡಿದರು.

ವಿವಿಧ ಅವಧಿಗಳಲ್ಲಿ ನಡೆದ ಕಾರ್ಯಾಗಾರದಲ್ಲಿ ಉಪನ್ಯಾಸಕಿಯರಾದ ದಿವ್ಯಾ ಜಿ, ಅನುಪಮಾ ಶೇಟ್ ಹಾಗೂ ಡಾ.ಸ್ನೇಹಾ ಬಿ ಎಸ್ ಉಪಸ್ಥಿತರಿದ್ದರು. ಉಪನ್ಯಾಸಕಿ ದಿವ್ಯಾ ಕೆ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು

