ಕ್ವಾರಿ ಗುಂಡಿಗೆ ಬಿದ್ದು ಮೂರು ಕಾಡುಕೋಣಗಳ ದಾರುಣ ಸಾವು

0
28

ವಿಟ್ಲ : ಮೂರು ಕಾಡುಕೋಣಗಳು ಕಪ್ಪುಕಲ್ಲಿನ ಕ್ವಾರಿಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ಉಕ್ಕುಡ ಸಮೀಪದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ವನ್ಯಜೀವಿ ಇಲಾಖೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.

ಶುಕ್ರವಾರ ಬೆಳಗ್ಗೆ ಮೂರು ಕಾಡುಕೋಣಗಳು ಏಕಾಏಕಿ ಕಲ್ಲಿನ ಕ್ವಾರಿ ಪ್ರದೇಶಕ್ಕೆ ಇಳಿದಿವೆ. ಅವುಗಳನ್ನು ಕ್ವಾರಿಯಿಂದ ಹೊರಗೆ ಕಳುಹಿಸಲು ಸ್ಥಳೀಯರು ಹಾಗೂ ಸಂಬಂಧಪಟ್ಟವರು ಪ್ರಯತ್ನಿಸಿದ ವೇಳೆ ಭಯಗೊಂಡ ಕಾಡುಕೋಣಗಳು ಎಲ್ಲೆಂದರಲ್ಲಿ ಓಡಾಡಿ ಕ್ವಾರಿಯ ಆಳವಾದ ಗುಂಡಿಗೆ ಬಿದ್ದಿವೆ ಎನ್ನಲಾಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡು ಮೂರು ಕಾಡುಕೋಣಗಳು ಮೃತಪಟ್ಟಿವೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕಾಡುಕೋಣಗಳನ್ನು ರಕ್ಷಿಸಲು ಪ್ರಯತ್ನ ನಡೆಸಿದರು. ಮೃತಪಟ್ಟ ಕಾಡುಕೋಣಗಳು ಹೆಣ್ಣು ಕಾಡುಕೋಣಗಳಾಗಿದ್ದು, ಅವುಗಳಲ್ಲಿ ಒಂದು ಮರಿಯಾಗಿತ್ತು ಎಂದು ತಿಳಿದುಬಂದಿದೆ.

ಯುಕೆಟಿಸಿಎಲ್‌ನ 400 ಕೆವಿ ವಿದ್ಯುತ್ ಮಾರ್ಗ ನಿರ್ಮಾಣದ ಬಳಿಕ ಕಾಡುಪ್ರಾಣಿಗಳು ನಾಡಿನತ್ತ ಮುಖ ಮಾಡುತ್ತಿರುವುದು ಕಂಡುಬರುತ್ತಿದ್ದು, ಕ್ವಾರಿಯ ಸುತ್ತಮುತ್ತ ಸೂಕ್ತ ರಕ್ಷಣಾ ವ್ಯವಸ್ಥೆ ಇಲ್ಲದಿರುವುದರಿಂದ ಈ ದುರ್ಘಟನೆ ಸಂಭವಿಸಿದೆ ಎಂಬ ಮಾತುಗಳು ಕೇಳಿಬಂದಿವೆ.

ಮೃತ ಕಾಡುಕೋಣಗಳ ಮೃತದೇಹಗಳನ್ನು ರಕ್ಷಿತಾರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದ್ದು, ಎಸಿಎಫ್ ಅವರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಬಳಿಕ ಅರಣ್ಯ ಇಲಾಖೆಯ ನಿಯಮಾನುಸಾರ ಮುಂದಿನ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ವನ್ಯಜೀವಿ ಇಲಾಖೆ ತನಿಖೆ ಮುಂದುವರಿಸಿದೆ.