ಬೆಂಗಳೂರಿನಲ್ಲಿ ಬೇಕರಿ ಮೇಲೆ ಪುಂಡರ ದಾಳಿ; ಸಾಲ ನಿರಾಕರಿಸಿದ್ದಕ್ಕೆ ಮಾಲೀಕರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು

0
11

ಬೆಂಗಳೂರು: ಬೆಂಗಳೂರಿನ ಆರ್.ಟಿ. ನಗರದಲ್ಲಿ ಸಣ್ಣ ಉದ್ಯಮ ನಡೆಸುತ್ತಿದ್ದ ದಂಪತಿಯ ಬೇಕರಿಯ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ, ಅಂಗಡಿ ಧ್ವಂಸಗೊಳಿಸಿ ಮಾಲೀಕರ ಮೇಲೆ ಹಲ್ಲೆ ನಡೆಸಿದ ಘಟನೆ ಭಾನುವಾರ ನಡೆದಿದೆ.

ಚಂದ್ರಶೇಖರ್ ಶೆಟ್ಟಿ ಹಾಗೂ ರೂಪ ಶೆಟ್ಟಿ ದಂಪತಿ ‘ಮಂಜುನಾಥ ಕಾಂಡಿಮೆಂಟ್ಸ್’ ಎಂಬ ಬೇಕರಿ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದರು. ಇದೇ ವೇಳೆ ಅಂಗಡಿಗೆ ಬಂದ ಇಬ್ಬರು ವ್ಯಕ್ತಿಗಳು ಸಾಲ ಕೇಳಿದ್ದು, ಅಂಗಡಿ ಮಾಲೀಕರು ನಿರಾಕರಿಸಿದ ಹಿನ್ನೆಲೆಯಲ್ಲಿ ಕೆಲ ಪುಂಡರನ್ನು ಒಗ್ಗೂಡಿಸಿಕೊಂಡು ಅಂಗಡಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ ಎನ್ನಲಾಗಿದೆ.

ದುಷ್ಕರ್ಮಿಗಳು ಅಂಗಡಿಯಲ್ಲಿದ್ದ ಸಾಮಗ್ರಿಗಳನ್ನು ಧ್ವಂಸಗೊಳಿಸಿದ್ದು, ಮಾಲೀಕರ ಮೇಲೂ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಚಂದ್ರಶೇಖರ್ ಶೆಟ್ಟಿಯವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಬೇಕರಿ ಕಾಂಡಿಮೆಂಟ್ಸ್ ಮತ್ತು ಸಣ್ಣ ಉದ್ದಿಮೆದಾರರ ಒಕ್ಕೂಟದ ರಾಜ್ಯಾಧ್ಯಕ್ಷ ಡಿ.ಬಿ. ಪ್ರತಾಪ್ ಶೆಟ್ಟಿ, ಉಪಾಧ್ಯಕ್ಷ ಭೋಜರಾಜ ಶೆಟ್ಟಿ, ಸುನಿಲ್ ಶೆಟ್ಟಿ ಜೆ, ಸುಕೇಶ್ ಶೆಟ್ಟಿ ಜೆ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳ ನೇತೃತ್ವದಲ್ಲಿ ಸಂತ್ರಸ್ತರೊಂದಿಗೆ ಆರ್.ಟಿ. ನಗರ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಲಾಯಿತು.

ದೂರಿನ ಆಧಾರದ ಮೇಲೆ ಪೊಲೀಸರು ತಕ್ಷಣ ಎಫ್‌ಐಆರ್ ದಾಖಲಿಸಿಕೊಂಡಿದ್ದು, ಆರೋಪಿಗಳ ಬಂಧನಕ್ಕಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.

ವರದಿ: ವಿನೋದ್ ಶೆಟ್ಟಿ, ಉಡುಪಿ