ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಒಂದೆರಡು ಜಿಲ್ಲೆಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಕಡೆಗಳಲ್ಲಿ ಅಲ್ಲಲ್ಲಿ ಮಳೆ ನಿರೀಕ್ಷೆ ಇದೆ. ವಿಶೇಷವೆಂದರೆ ರಾಜ್ಯದ ಗರಿಷ್ಠ ತಾಪಮಾನ ಏರಿಕೆ ಆಗುತ್ತಿದ್ದು, ಎಲ್ಲೆಡೆ ‘ಉಷ್ಣಅಲೆ’ ನಿರೀಕ್ಷೆ ಇದೆ.
ಈಗಾಗಲೇ ಕರಾವಳಿ ಸೇರಿ ಕೆಲವು ಜಿಲ್ಲೆಗಳಿಗೆ ಉಷ್ಣ ಅಲೆ (Heat Wave) ಹಿನ್ನೆಲೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಮುಂದಿನ ಒಂದು ವಾರ (ಏಪ್ರಿಲ್ 20) ರಾಜ್ಯದಲ್ಲಿ ಬಿಸಿಲು ಮತ್ತು ಮಳೆ ಮಿಶ್ರಿತ ವಾತಾವರಣ ಕಂಡು ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇಂದು ಏಪ್ರಿಲ್ 14ರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಮಳೆ ಮತ್ತೆ ಅಬ್ಬರಿಸಲಿದೆ. ಪ್ರತ್ಯೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣವಾಗಿ ಸುರಿಯಲಿದ್ದು, ಒಣಹವೆ ಮೇಲುಗೈ ಸಾಧಿಸಲಿದೆ. ಉತ್ತರ ಕರ್ನಾಟಕ, ಕರಾವಳಿ ಹಾಗೂ ಕೆಲವು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಒಂದು ವಾರ ಮಳೆ ಬರಲಿದೆ. ಮಾತ್ರವಲ್ಲದೇ ಕಳೆದ ಎರಡು ದಿನಗಳಲ್ಲಿ ರಾಜ್ಯ ವಿವಿಧೆಡೆ ಗರಿಷ್ಠ ತಾಪಮಾನದಲ್ಲಿ ಸುಮಾರು 1-3 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಿದ್ದು. ಇದೇ ಸ್ಥಿತಿ ರಾಜ್ಯದಲ್ಲಿ ಮುಂದುವರಿಯಲಿದೆ ಎಂದು ಐಎಂಡಿ ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಕರಾವಳಿಯ ಉಡುಪಿ, ಉತ್ತರ ಕನ್ನಡದಲ್ಲಿ ಮುಂದಿನ ಏಪ್ರಿಲ್ 15ರವರೆಗೆ ಎರಡು ದಿನ ಅತ್ಯಧಿಕ ಬಿಸಿಲು ಕಂಡು ಬರಲಿದೆ. ಗರಿಷ್ಠ ತಾಪಮಾನ ಏರಿಕೆ ಆಗಲಿದ್ದು, ದಕ್ಷಿಣ ಕನ್ನಡ ಜಿಲ್ಲೆ ಒಳಗೊಂಡಂತೆ ಮೂರು ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಮಳೆಯು ಆಗಲಿದೆ. ನಂತರ ಏಪ್ರಿಲ್ 20ರವರೆಗೆ ಕರಾವಳಿಯಲ್ಲಿ ಮತ್ತೆ ಮಳೆ ತೀವ್ರ ಹೆಚ್ಚಾಗುವ ಸಾಧ್ಯತೆ ಇದ್ದು, ವ್ಯಾಪಕ ಮಳೆ ನಿರೀಕ್ಷೆ ಇದೆ. ಕಲಬುರಗಿಯಲ್ಲಿ 41ಡಿಸೆ ತಾಪಮಾನ, ಉಷ್ಣಅಲೆ ಎಚ್ಚರಿಕೆ, ಕೆಲವೆಡೆ ಮಳೆ ಸಾಧ್ಯತೆ
ಉತ್ತರ ಕರ್ನಾಟಕದ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಭಾಗದಲ್ಲಿ ಮುಂದಿನ ಒಂದು ವಾರ ಹಗುರದಿಂದ ಸಾಧಾರಣವಾಗಿ ಗುಡುಗು ಸಹಿತ ವ್ಯಾಪಕ ಮಳೆ ಆಗಲಿದೆ. ಇದರಲ್ಲಿ ಏಪ್ರಿಲ್ 16ರಿಂದ ಮೂರು ದಿನ ಕಲಬುರಗಿ, ವಿಜಯಪುರ, ಬೆಳಗಾವಿ, ಬೀದರ್ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ‘ಉಷ್ಣಅಲೆ” ನಿರ್ಮಾಣವಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇನ್ನು ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಮಂಡ್ಯ, ಶಿವಮೊಗ್ಗ, ರಾಮನಗರ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಮಿಂಚು ಸಹಿತ ಹಗುರದಿಂದ ಸಾಧಾರಣೆ ಮಳೆ ಸಂಭವವಿದೆ. ಇನ್ನುಳಿದ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ದಾವಣಗೆರೆ, ಚಿತ್ರದುರ್ಗ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಕೋಲಾರ, ತುಮಕೂರು ಭಾಗಗಳಲ್ಲಿ ಬಿಸಿಲು ಹೆಚ್ಚಿರಲಿದೆ. ಒಟ್ಟಾರೆ ರಾಜ್ಯದಲ್ಲಿ ಏಳು ದಿನ ಅಲ್ಲಲ್ಲಿ ಮಳೆ ಆಗುವುದರ ಜೊತೆಗೆ ಅತ್ಯಧಿಕ ಗರಿಷ್ಠ ತಾಪಮಾನ ಕಂಡು ಬರಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ತಮಿಳುನಾಡು, ಕರ್ನಾಟಕ ಕರಾವಳಿ ಭಾಗಕ್ಕೆ ಸಮೀಪದಲ್ಲಿ ಸಮುದ್ರ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ತೀವ್ರಗೊಳ್ಳುವ ಲಕ್ಷಣಗಳು ಕಾಣುತ್ತಿವೆ. ಇದರ ಪರಿಣಾಮ ಪೂರ್ವ ಮುಂಗಾರು ಮಳೆ ಚುರುಕಾಗಿದೆ. ಆದರೆ ಸದ್ಯಕ್ಕೆ ಜೋರು, ಭಾರೀ ಮಳೆ ಲಕ್ಷಣಗಳು ಇಲ್ಲ ಎನ್ನಲಾಗಿದೆ.
ಕಲಬುರಗಿಯಲ್ಲಿ 41 ಡಿಗ್ರಿ ಸೆಲ್ಸಿಯಸ್ ರಾಜ್ಯದ ಗರಿಷ್ಠ ತಾಪಮಾನ ದಾಖಲಾಗಿದೆ. ಉಳಿದಂತೆ ಬೀದರ್, ವಿಜಯಪುರ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ವ್ಯಾಪ್ತಿಯಲ್ಲಿ 39 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡು ಬಂದಿದೆ. ಗದಗ, ಬಾಗಲಕೋಟೆ, ಗಂಗಾವತಿ, ತುಮಕೂರು ಭಾಗಗಳಲ್ಲಿ 38 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ರಾಜ್ಯದಾದ್ಯಂತ ಒಣಹವೆ ಮುಂದುವರಿಯುವ ಲಕ್ಷಣಗಳಿವೆ.

