ಪ್ರತಿ ವರ್ಷ ಜೂನ್ 19ರಂದು ವಿಶ್ವ ಸಿಕಲ್ ಸೆಲ್ ದಿನ ಎಂದು ಆಚರಿಸಲಾಗುತ್ತಿದ್ದು, 2009ರಿಂದ ವಿಶ್ವ ಸಂಸ್ಥೆ ಈ ರೋಗದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಆಚರಣೆಯನ್ನು ಜಾರಿಗೆ ತಂದಿತು. ಇದೊಂದು ರಕ್ತಸಂಬಂಧಿ ಅನುವಂಶೀಯ ಖಾಯಿಲೆ ಆಗಿದ್ದು, ಕೆಂಪು ರಕ್ತಕಣಗಳು ಈ ರೋಗದಿಂದ ಬಳಲುತ್ತವೆ. ಈ ರೋಗಿಗಳಲ್ಲಿ ಕೆಂಪು ರಕ್ತಕಣಗಳ ರಚನೆಯಲ್ಲಿ ವ್ಯತ್ಯಯ ಉಂಟಾಗಿ, ಕುಡುಗೋಲು ಅಥವಾ ಆಂಗ್ಲಭಾಷೆಯಲ್ಲಿ ‘ಸಿಕಲ್’ ಎಂಬ ರಚನೆ ಹೊಂದಿರುವುದರಿಂದ ಈ ರೋಗಕ್ಕೆ ಕುಡುಗೋಲು ಕಣ ಖಾಯಿಲೆ’ ಅಥವಾ ‘ಸಿಕಲ್ ಸೆಲ್ ಖಾಯಿಲೆ’ ಎಂದು ಕರೆಯಲಾಗುತ್ತದೆ.
ಇದೊಂದು ವಂಶವಾಹಕ ರೋಗವಾಗಿದ್ದು, ತಂದೆ ತಾಯಂದಿರಿಂದ ಈ ರೋಗ ಮಕ್ಕಳಿಗೆ ಜನ್ಮಜಾತವಾಗಿ ಬಳುವಳಿಯಾಗಿ ಬಂದಿರುತ್ತದೆ. ಆಫ್ರಿಕಾ ದೇಶವೊಂದರಲ್ಲಿಯೇ ದಿನವೊಂದರಲ್ಲಿ 1000 ಮಕ್ಕಳು ಈ ರೋಗದೊಂದಿಗೆ ಹುಟ್ಟುತ್ತಾರೆ ಮತ್ತು 5 ವರ್ಷದೊಳಗೆ ಸಾವನ್ನಪ್ಪುತ್ತಾರೆ. ಅಮೇರಿಕಾ ದೇಶವೊಂದರಲ್ಲಿ ವರ್ಷಕ್ಕೆ 1 ಲಕ್ಷ ಮಕ್ಕಳು ಈ ರೋಗಕ್ಕೆ ತುತ್ತಾಗುತ್ತಾರೆ. ಭಾರತ, ಬ್ರೆಜಿಲ್, ಟರ್ಕಿ, ಸೌದಿ ಅರೇಬಿಯಾ ಗಯಾನ, ಗ್ರೀಕ್ ಮುಂತಾದ ದೇಶಗಳಲ್ಲಿಯೂ ಈ ರೋಗ ಕಂಡು ಬರುತ್ತದೆ.
ಏನಿದು ಕುಡುಗೋಲು ಕಣ ಖಾಯಿಲೆ?
ಸಾಮಾನ್ಯವಾಗಿ ರಕ್ತದಲ್ಲಿನ ಕೆಂಪು ರಕ್ತಕಣಗಳಲ್ಲಿರುವ ಹಿಮೋಗ್ಲೋಬಿನ್ ಎಂಬ ಪ್ರೋಟೀನ್ ರಕ್ತದಲ್ಲಿ ಆಮ್ಲಜನಕ ಸರಬರಾಜು ಮಾಡುವ ಕೆಲಸವನ್ನು ಮಾಡಿ ಜೀವಕೋಶಗಳನ್ನು ಜೀವಂತವಾಗಿಡುತ್ತದೆ. ಈ ಖಾಯಿಲೆ ಇರುವವರಲ್ಲಿ ಅಸಹಜವಾದ ಕೆಂಪುರಕ್ತಕಣಗಳ ರಚನೆಯಿಂದಾಗಿ, ಸಣ್ಣ ಸಣ್ಣ ರಕ್ತನಾಳಗಳಲ್ಲಿ ಕೆಂಪು ರಕ್ತಕಣಗಳು ಸೇರಿಕೊಂಡು, ರಕ್ತನಾಳಗಳು ಮುಚ್ಚಿಕೊಂಡು ಜೀವಕೋಶಗಳಿಗೆ ಆಮ್ಲಜನಕ ಸರಬರಾಜು ಮಾಡುವ ಪ್ರಕ್ರಿಯೆಗೆ ತಡೆಯೊಡ್ಡುತ್ತದೆ. ಜೀವಕೋಶಗಳಿಗೆ ಆಮ್ಲಜನಕ ಸಿಗದೇ, ಹಲವಾರು ರೋಗ ಲಕ್ಷಣಗಳಿಗೆ ಮುನ್ನುಡಿ ಬರೆಯುತ್ತದೆ. ರಕ್ತದಲ್ಲಿನ ಹಿಮೋಗ್ಲೋಬಿನ್ ಅಂಶ ಕಡಮೆಯಾಗಿ ಅನಿಮೀಯಾ ಅಥವಾ ರಕ್ತಹೀನತೆಗೆ ದಾರಿ ಮಾಡಿಕೊಡುತ್ತದೆ.
ರೋಗದ ಲಕ್ಷಣಗಳು ಏನು?
ರಕ್ತಹೀನತೆ ಅಥವಾ ಅನೀಮಿಯಾದಿಂದಾಗಿ ರೋಗಿಗಳು ಉಸಿರಾಟದ ಸಮಸ್ಯೆಯಿಂದ ಬಳಲುತ್ತಾರೆ. ಈ ರೋಗಿಗಳು ಯಾವುದೇ ಕೆಲಸ ಮಾಡುವಾಗ ಬೇಗನೆ ಬಳಲುತ್ತಾರೆ ಮತ್ತು ಸುಸ್ತಾಗಿ ಬಿಡುತ್ತಾರೆ. ಅದರ ಜೊತೆಗೆ ನೋವು, ಪದೇ ಪದೇ ಸೋಂಕಿಗೆ ಒಳಗಾಗುವ ಸಾಧ್ಯತೆ ಇರುತ್ತದೆ. ತಲೆನೋವು, ಹೃದಯದ ಸಮಸ್ಯೆಗಳು, ಯಕೃತ್ತಿನ ತೊಂದರೆಗಳು, ಮೂಳೆಯಲ್ಲಿ ಹಠಾತ್ ನೋವು ಕಾಣಿಸಿಕೊಳ್ಳುತ್ತದೆ. ರಕ್ತ ಹೀನತೆಯಿಂದಾಗಿ ಕಿಡ್ನಿ, ಗುಲ್ಮಗ್ರಂಥಿ, ಮೆದುಳು ಮತ್ತು ಶ್ವಾಸಕೋಶದ ತೊಂದರೆಗಳು ಪದೇ ಪದೇ ಬರುತ್ತದೆ.
ಅಂಗೈ ಮತ್ತು ಅಂಗಾಲುಗಳು ತಣ್ಣಗಾಗುವುದು, ರಕ್ತಹೀನತೆಯಿಂದಾಗಿ ಚರ್ಮ ಬಿಳಿಚಿಕೊಳ್ಳುವುದು, ಪದೇ ಪದೇ ಜಾಂಡಿಸ್‍ಗೆ ತುತ್ತಾಗುವುದು, ಕಾಲುಗಳಲ್ಲಿ ಪದೇ ಪದೇ ವಾಸಿಯಾಗದ ಹುಣ್ಣುಗಳು ಕಾಣಿಸಿಕೊಳ್ಳುತ್ತದೆ. “ಸಿಕಲ್ ಸೆಲ್ ಕ್ರೈಸಿಸ್” ಎಂಬುದು ಒಂದು ತುರ್ತು ಚಿಕಿತ್ಸೆಯ ಅಗತ್ಯವಿರುವ ಲಕ್ಷಣವಾಗಿದ್ದು, ಉಸಿರಾಟದ ತೊಂದರೆ, ವಿಪರೀತ ನೋವು, ಮೂಳೆಗಳು ಹಿಂಡಿ ಹಿಪ್ಪೆ ಮಾಡುವ ಅಸಾಧ್ಯ ನೋವು ಕಂಡು ಬರುತ್ತದೆ. ತಕ್ಷಣವೇ ಆಸ್ಪತ್ರೆಗಳಲ್ಲಿ ಒಳ ರೋಗಿಯಾಗಿ ಚಿಕಿತ್ಸೆ ನೀಡುವ ಅಗತ್ಯವಿರುತ್ತದೆ.
ಚಿಕಿತ್ಸೆ ಹೇಗೆ?
ಕುಡುಗೋಲು ಕಣ ಖಾಯಿಲೆ ಮಾರಣಾತಿಂಕ ರೋಗವಾಗಿದ್ದು. ಸಂಪೂರ್ಣವಾಗಿ ರೋಗವನ್ನು ಗುಣಪಡಿಸಲು ಸಾಧ್ಯವಿಲ್ಲದಿದ್ದರೂ ರೋಗಿಗೆ ಗುಣಮಟ್ಟದ ಜೀವನ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸಣ್ಣ ಪುಟ್ಟ ನೋವಾದಲ್ಲಿ ನೋವು ನಿವಾರಕ ಔಷಧಿ ಮತ್ತು ಹೀಲಿಂಗ್ ಪ್ಯಾಡ್‍ಗಳ ಮೂಲಕ ನೋವು ನಿವಾರಣೆ ಮಾಡಲಾಗುತ್ತದೆ. ವಿಪರೀತ ನೋವಿದ್ದಲ್ಲಿ ಒಳರೋಗಿಯಾಗಿ ಆಸ್ಪತ್ರೆಯಲ್ಲಿ ದಾಖಲಾಗಬೇಕಾಗುತ್ತದೆ. ಅದೇ ರೀತಿ ದೇಹಕ್ಕೆ ಅಗತ್ಯವಿರುವ ದ್ರವಗಳನ್ನು ರಕ್ತನಾಲಗಳ ಮೂಲಕ ನೀಡಲಾಗುತ್ತದೆ. ನಾರ್ಕೋಟಿಕ್ ನೋವು ನಿವಾರಕ ಔಷಧಿಯ ಅಗತ್ಯವಿರುತ್ತದೆ. ಅದೇ ರೀತಿ ಈ ರೋಗಿಗಳ ಪದೇ ಪದೇ ಸೋಂಕಿಗೆ ತುತ್ತಾಗದಂತೆ ಜಾಗ್ರತೆ ವಹಿಸಬೇಕಾಗುತ್ತದೆ. ಪದೇ ಪದೇ ಕಾಡುವ ಜ್ವರ, ಮೂಳೆ ನೋವು ಮತ್ತು ಸೋಂಕು ಈ ರೋಗದ ಮುಖ್ಯ ಲಕ್ಷಣವಾಗಿದ್ದು ನಿರಂತರವಾದ ವೈದ್ಯರ ಸಲಹೆ ಮತ್ತು ಚಿಕಿತ್ಸೆ ಅತೀ ಅಗತ್ಯ.
ಡಾ|| ಮುರಲೀ ಮೋಹನ್ ಚೂಂತಾರು

