ಮಡಿಕೇರಿಯಲ್ಲಿ ಸಾಂಪ್ರದಾಯಿಕ ಕಾಫಿ ದಸರಾ ಸಂಭ್ರಮ :- ಕಾಫಿ ಬೆಳೆಗೆ ಹೆಚ್ಚಿನ ಉತ್ತೇಜನ ಶಾಸಕ ಮಂತರ್ ಗೌಡ

0
7

ಮಡಿಕೇರಿ : ಕಾಫಿ ಬೆಳೆಗಾರರು ಜಿಲ್ಲೆ ಆರ್ಥಿಕತೆಯ ಬೆನ್ನೆಲುಬು ಎಂದು ಶಾಸಕರಾದ ಡಾ.ಮಂತರ್ ಗೌಡ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದ ಗಾಂಧಿ ಮೈದಾನದ ದೊಡ್ಡಮನೆ ಸಾಕಮ್ಮ ವೇದಿಕೆಯಲ್ಲಿ ನಡೆದ ಕಾಫಿ ದಸರಾ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾಫಿ ಬೆಳೆಗಾರರನ್ನು ಒಂದೆಡೆ ಸೇರಲು 3ನೇ ಕಾಫಿ ದಸರಾಆಯೋಜಿಸಲಾಗಿದ್ದುಇದೊಂದು ಪ್ರಯತ್ನವಾಗಿದೆ. ಕಾಫಿಯಲ್ಲಿ ಕೇಕ್, ಚಾಕೊಲೇಟ್ ಸೇರಿದಂತೆ ಹಲವು ಬಗೆಯ ತಿನಿಸು ತಯಾರಿಸಬಹುದಿದ್ದು, ಕಾಫಿಯನ್ನು ಮತ್ತಷ್ಟು ಔನ್ನತ್ಯಕ್ಕೆ ಕೊಂಡೊಯ್ಯಬೇಕು ಎಂದು ಅವರು ಸಲಹೆ ಮಾಡಿದರು.

‘ಹಿರಿಯರು ಭೂಮಿಯ ಆಸ್ತಿ ಉಳಿಸಿಕೊಂಡು ಬಂದಿದ್ದು ಅದನ್ನು ಸಂರಕ್ಷಿಸಬೇಕು. ವೈದ್ಯ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ತೊಡಗಿಕೊಂಡರೂ ಸಹ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಡಾ.ಮಂತರ್ ಗೌಡ ಅವರು ಕರೆ ನೀಡಿದರು.

ಸಂಕಷ್ಟದ ಸಂದರ್ಭದಲ್ಲಿ ಕಾಫಿ ಕೃಷಿಯು ಕಾಫಿ ಕಾರ್ಮಿಕರನ್ನು ಕೈಹಿಡಿದಿದೆ ಎಂಬುದನ್ನು ಮರೆಯಬಾರದು. ಕಾಫಿ ಬೆಳೆಗಾರರು ಗುಣಮಟ್ಟದ ಕಾಫಿ ಬೆಳೆದು ದೇಶ-ವಿದೇಶಗಳಲ್ಲಿ ಪಸರಿಸುವಂತಾಗಬೇಕು. ಕಾಫಿ ಬೆಳೆ ಅಭಿವೃದ್ಧಿ ಸಂಬಂಧಿಸಿದಂತೆ ಕಾಫಿ ದಸರಾ ಸಹಕಾರಿಯಾಗಿದೆ ಎಂದು ಶಾಸಕರು ಹೇಳಿದರು.

ಭಾರತೀಯ ಕಾಫಿ ಮಂಡಳಿ ಅಧ್ಯಕ್ಷರಾದ ದಿನೇಶ್ ಎಂ.ಜೆ. ಅವರು ಮಾತನಾಡಿ, ಕೇಂದ್ರ ಸರ್ಕಾರ ಕಾಫಿ ಬೆಳೆಗೆ ವಿಮೆ ನೀಡಲು ಒಪ್ಪಿಗೆ ನೀಡಿದ್ದು, ರಾಜ್ಯ ಸರ್ಕಾರವೂ ಸಹ ಅಡಿಕೆ ಮತ್ತು ಕಾಳುಮೆಣಸು ಬೆಳೆಗೆ ಹವಾಮಾನ ಆಧಾರಿತ ಬೆಳೆವಿಮೆ ನೀಡುತ್ತಿದೆ. ಆ ದಿಸೆಯಲ್ಲಿ ಕಾಫಿ ಬೆಳೆಗೂ ಬೆಳೆ ವಿಮೆ ನೀಡುವಂತಾಗಬೇಕು ಎಂದು ಅವರು ಕೋರಿದರು.

ಕೊರ್ಗ್‌ ಎಂದರೆ ಒಂದು ರೀತಿ ಬ್ರ್ಯಾಂಡ್ ಇದ್ದಂತೆ, ಕಾಫಿ, ಜೇನು, ಕಿತ್ತಳೆ, ಏಲಕ್ಕಿ, ಕರಿ ಮೆಣಸು, ಕ್ರೀಡೆ, ಸೇನೆ, ಸಿನಿಮಾ ಹೀಗೆ ಒಂದು ರೀತಿಯ ಬ್ರ್ಯಾಂಡ್ ಇದೆ. ಇದನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕು ಎಂದು ದಿನೇಶ್ ಅವರು ಸಲಹೆ ಮಾಡಿದರು.

ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ ಅವರು ಮಾತನಾಡಿ, ಕಾಫಿ ಉತ್ಪಾದನೆ ಜೊತೆಗೆ ಮಾರುಕಟ್ಟೆ ಸೌಲಭ್ಯ ಹೆಚ್ಚಾಗಬೇಕು ಎಂದು ಅವರು ಹೇಳಿದರು. ಕಾಫಿ ಬೆಳೆಗಾರರು ಕಾಫಿ ಉತ್ಪಾದಿಸುವಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಾಫಿ ಗಿಡಕ್ಕೆ ಗೊಬ್ಬರ, ಕಸ ತೆಗೆಯುವುದು ಸೇರಿದಂತೆ ಅದನ್ನು ನೋಡಿಕೊಳ್ಳಲು ಖರ್ಚು ವೆಚ್ಚ ಹೆಚ್ಚಾಗಿದೆ. ಆದ್ದರಿಂದ ಉತ್ಪಾದನೆಯ ಜೊತೆಗೆ ಮಾರುಕಟ್ಟೆ ವ್ಯವಸ್ಥೆ ಬಲಪಡಿಸಬೇಕು ಎಂದು ಸುಜಾ ಕುಶಾಲಪ್ಪ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕ್ರೀಡಾ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷರಾದ ಅರುಣ್ ಮಾಚಯ್ಯ ಅವರು ಮಾತನಾಡಿ, ಕಾಫಿ ಬೆಳೆಗಾರರ ಸಂಕಷ್ಟವನ್ನು ಕೇಂದ್ರದ ಜೊತೆಗೆ ರಾಜ್ಯ ಸರ್ಕಾರವು ಸಹ ಕೈ ಜೋಡಿಸಿ ಅಗತ್ಯ ಆರ್ಥಿಕ ಸಹಕಾರ ನೀಡಬೇಕು ಎಂದು ಕೋರಿದರು.
ಈ ಬಾರಿ ಮಳೆ ಕಡಿಮೆಯಾಗಿದ್ದು, ಮುಂದಿನ ದಿನಗಳಲ್ಲಿ ಕಾಫಿ ಬೆಳೆಯ ಸಂರಕ್ಷಣೆ ಹೇಗೆಂಬ ಬಗ್ಗೆ ಯೋಚಿಸಬೇಕಿದೆ ಎಂದರು.

ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ, ಕಾಫಿ ಮಂಡಳಿ ನಿರ್ದೇಶಕರಾದ ತಳೂರು ಕಿಶೋರ್ ಕುಮಾರ್, ಕೂರ್ಗ್ ಪ್ಲಾಂಟರ್ ಅಸೋಸಿಯೇಷನ್‌ನ ಪವನ್ ಮೊಣ್ಣಪ್ಪ,
ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ ಯಲ್ಲಪ್ಪ, ಕಾಫಿ ಬೆಳೆಗಾರರಾದ ವಿನೋದ್, ಶಿವಪ್ಪ, ದಸರಾ ಸಮಿತಿಯ ಕಾರ್ಯಾಧ್ಯಕ್ಷರಾದ
ಬಿ.ಕೆ.ಅರುಣ್ ಕುಮಾರ್, ಉಪಾಧ್ಯಕ್ಷರಾದ ಮಹೇಶ್ ಜೈನಿ, ಅರುಣ್ ಶೆಟ್ಟಿ, ಸಬಿತಾ, ವಿಧಾನ ಪರಿಷತ್ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ, ಪ್ರಮುಖರಾದ
ಕೆ.ಪಿ.ಚಂದ್ರಕಲಾ, ದಿವ್ಯ ಮಂತರ್ ಗೌಡ, ಮಂಡಳಿಯ ಉಪ ನಿರ್ದೇಶಕರಾದ ವೆಂಕಟ್ ರೆಡ್ಡಿ, ಚಂದ್ರಶೇಖರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವರದಿ: ಪ್ರಿತುನ್ ಪೂವಣ್ಣ