ಪೊನ್ನಂಪೇಟೆ : 48ನೇ ವರ್ಷದ ಶ್ರೀ ಕಾವೇರಿ ದಸರಾ ಜನೋತ್ಸವದ ನಾಲ್ಕನೇ ದಿನ ಗೋಣಿಕೊಪ್ಪದಲ್ಲಿ 11ನೇ ವರ್ಷದ ಮಹಿಳಾ ದಸರಾ ವಿಜೃಂಭಣೆಯಿಂದ ನಡೆಯಿತು. ಮಹಿಳಾ ದಸರಾ ಅಧ್ಯಕ್ಷೆ ಮಂಜುಳಾ ಅವರ ಮುಂದಾಳತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡು ಸಂಭ್ರಮಿಸಿದರು.
ಬೆಳಿಗ್ಗೆ ಗೋಣಿಕೊಪ್ಪ ಬಸ್ ನಿಲ್ದಾಣದಿಂದ ಕಳಸ ಹೊತ್ತ ಮಹಿಳೆಯರ ಮೆರವಣಿಗೆಗೆ ಚಾಲನೆ ನೀಡಲಾಯಿತು. ನಾಗರಹೊಳೆ ಹಾಡಿಯ ರಮೇಶ್ ಅವರ ವಾದ್ಯಗೋಷ್ಠಿಯೊಂದಿಗೆ ನಗರದ ರಾಜಬೀದಿಗಳಲ್ಲಿ ಸಾಗಿದ ಮೆರವಣಿಗೆ ಶ್ರೀ ಕಾವೇರಿ ದಸರಾ ಕಲಾ ವೇದಿಕೆಯಲ್ಲಿ ಸಂಪನ್ನಗೊಂಡಿತು.
ಬಳಿಕ ಮೈದಾನದಲ್ಲಿ ಆಯೋಜಿಸಿದ್ದ ಮಹಿಳಾ ಕ್ರೀಡಾಕೂಟಕ್ಕೆ ಶ್ರೀ ಕಾವೇರಿ ದಸರಾ ಸಮಿತಿಯ ಕಾರ್ಯಾಧ್ಯಕ್ಷ ಪ್ರಮೋದ್ ಗಣಪತಿ ಹಾಗೂ ಗುತ್ತಿಗೆದಾರ ದೇವರಾಜು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ನಂತರ ಪ್ರಮೋದ್ ಗಣಪತಿ ಮಾತನಾಡಿ, ಗೋಣಿಕೊಪ್ಪ ದಸರಾ ಸಮಿತಿಯ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಶಾಸಕ ಎ.ಎಸ್. ಪೊನ್ನಣ್ಣ ಅವರ ಸಹಕಾರವನ್ನು ಮರೆಯಲಾಗದು. ಅವರ ಅನುಪಸ್ಥಿತಿಯಲ್ಲಿ ಅವರ ಪ್ರಯತ್ನದಿಂದ ಗೋಣಿಕೊಪ್ಪ ದಸರಾಕ್ಕೆ ಒಂದು ಕೋಟಿ ರೂ. ಅನುದಾನ ದೊರೆತಿದ್ದು, ದಸರಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲು ಸಾಧ್ಯವಾಗಿದೆ ಎಂದರು.
ಸುಮಾರು ಹತ್ತು ವರ್ಷಗಳ ಹಿಂದೆ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರವೀಣ್ ಮೊಣ್ಣಪ್ಪ ಅವರ ನೇತೃತ್ವದಲ್ಲಿ ಆರಂಭವಾದ ಮಹಿಳಾ ದಸರಾ ಇಂದು ನಿರೀಕ್ಷೆಗೂ ಮೀರಿ ಜನಮೆಚ್ಚುಗೆ ಗಳಿಸಿದೆ. ದಸರಾವನ್ನು ರಾಜಕೀಯದ ದೃಷ್ಟಿಯಿಂದ ನೋಡದೆ, ಎಲ್ಲರೂ ಪಾಲ್ಗೊಳ್ಳಬೇಕು. ಇದು ನಮ್ಮ ದಸರಾ, ನಮ್ಮೂರಿನ ಹಬ್ಬ, ಇಲ್ಲಿ ರಾಜಕೀಯಕ್ಕೆ ಅವಕಾಶವಿಲ್ಲ ಎಂದು ಹೇಳಿದರು.

ಮಹಿಳಾ ದಸರಾ ಅಧ್ಯಕ್ಷೆ ಮಂಜುಳಾ ಮಾತನಾಡಿ, ನಿರೀಕ್ಷೆಗೂ ಮೀರಿ ಮಹಿಳೆಯರು ತಮ್ಮ ದೈನಂದಿನ ಕೆಲಸಗಳನ್ನು ಬದಿಗೊತ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ. ಕಾರ್ಯಕ್ರಮದ ಯಶಸ್ಸಿಗೆ ಕಾರ್ಯಾಧ್ಯಕ್ಷ ಪ್ರಮೋದ ಗಣಪತಿ, ಗುತ್ತಿಗೆದಾರ ದೇವರಾಜು ಸೇರಿದಂತೆ ಮಹಿಳಾ ದಸರಾ ಪದಾಧಿಕಾರಿಗಳು ಉತ್ತಮ ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು.
ಕ್ರೀಡೆ, ನೃತ್ಯ, ಭೇಷ್ವವೇಷ ಸ್ಪರ್ಧೆ
ಮಹಿಳೆಯರಿಗಾಗಿ ಬಾಂಬ್ ಇನ್ ದಿ ಸಿಟಿ, ಥ್ರೋಬಾಲ್, ಹಗ್ಗಜಗ್ಗಾಟ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಬಳಿಕ ವೇದಿಕೆಯಲ್ಲಿ ನೃತ್ಯ ಹಾಗೂ ಛದ್ಮವೇಷ ಸ್ಪರ್ಧೆಗಳು ನಡೆದವು. ಸ್ಪರ್ಧೆಗಳಲ್ಲಿ ಭಾಗವಹಿಸಿದ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ಮಹಿಳೆಯರು ಮನೆಯಲ್ಲಿ ತಯಾರಿಸಿದ ವಿವಿಧ ಬಗೆಯ ಖಾದ್ಯ ಪದಾರ್ಥಗಳನ್ನು ಮಾರಾಟಕ್ಕಾಗಿ ಮಳಿಗೆಗಳಲ್ಲಿ ಪ್ರದರ್ಶಿಸಿದ್ದು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು. ಕಾರ್ಯಕ್ರಮದಲ್ಲಿ ಶ್ರೀ ಕಾವೇರಿ ದಸರಾ ಸಮಿತಿ ಸಂಯೋಜಕಿ ಶೀಲಾ ಬೋಪಣ್ಣ, ಚಂದನ್ ಕಾಮತ್, ಕಾರ್ಯದರ್ಶಿ ಕಂದಾ ದೇವಯ್ಯ, ಖಜಾಂಚಿ ಧ್ಯಾನ್ ಸುಬ್ಬಯ್ಯ, ಸಾಂಸ್ಕೃತಿಕ ಸಮಿತಿಯ ಧಿನನ್ ಚಂಗಪ್ಪ, ಚಂದನ ಮಂಜುನಾಥ್, ಮಕ್ಕಳ ದಸರಾ ಸಮಿತಿಯ ಅಧ್ಯಕ್ಷೆ ವಾಮನ, ಅಲೀಮಾ, ಕುಸುಮ ಜೋಯಪ್ಪ, ನೊರೇರಾ ಧನ್ಯ, ಸುನಿತಾ, ಲತಾ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ಪ್ರಿತುನ್ ಪೂವಣ್ಣ

