ಉಡುಪಿ ಶ್ರೀಕೃಷ್ಣ ಮಠದಲ್ಲಿ ಸಂಪ್ರದಾಯಬದ್ಧ ದೀಪಾವಳಿ ಎಣ್ಣೆ ಶಾಸ್ತ್ರ ಹಾಗೂ ತೈಲಾಭ್ಯಂಜನ

0
8

ಉಡುಪಿ: ದೀಪಾವಳಿ ಹಬ್ಬದ ಪ್ರಯುಕ್ತ ಉಡುಪಿಯ ಶ್ರೀಕೃಷ್ಣ ಮಠದ ಪರ್ಯಾಯ ಶ್ರೀ ಶೀರೂರು ಮಠದಲ್ಲಿ ಎಣ್ಣೆ ಶಾಸ್ತ್ರ ಹಾಗೂ ತೈಲಾಭ್ಯಂಜನ ಕಾರ್ಯಕ್ರಮವು ಸಂಪ್ರದಾಯಬದ್ಧವಾಗಿ ಹಾಗೂ ಶಾಸ್ತ್ರೀಯ ವಿಧಿವಿಧಾನಗಳೊಂದಿಗೆ ನೆರವೇರಿತು.

ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ವೇದವರ್ಧನತೀರ್ಥ ಶ್ರೀಪಾದರು ತಮ್ಮ ವಿದ್ಯಾಗುರುಗಳಾದ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಹಾಗೂ ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರ ಸಮ್ಮುಖದಲ್ಲಿ ಚಂದ್ರಶಾಲೆಯಲ್ಲಿ ಎಣ್ಣೆ ಶಾಸ್ತ್ರವನ್ನು ನೆರವೇರಿಸಿದರು.

ಧಾರ್ಮಿಕ ವಿಧಿವಿಧಾನಗಳೊಂದಿಗೆ ಯತಿಗಳು ಎಣ್ಣೆ ಶಾಸ್ತ್ರವನ್ನು ಪೂರೈಸಿದ ಬಳಿಕ ಭಕ್ತಾದಿಗಳಿಗೂ ಎಣ್ಣೆ ಶಾಸ್ತ್ರ ನೆರವೇರಿಸಲಾಯಿತು. ಬಳಿಕ ಶ್ರೀಮಠದ ಸಿಬ್ಬಂದಿ ವರ್ಗದವರು ಎಣ್ಣೆ ಶಾಸ್ತ್ರ ಹಾಗೂ ತೈಲಾಭ್ಯಂಜನವನ್ನು ನೆರವೇರಿಸಿ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ಅಷ್ಟಮಠಗಳ ವಿದ್ವಾಂಸರು, ಪರ್ಯಾಯ ಶ್ರೀಮಠದ ದಿವಾನರಾದ ಡಾ. ಉದಯಕುಮಾರ್ ಸರಳತ್ತಾಯ, ಪಾರುಪತ್ಯೆದಾರರಾದ ಶ್ರೀಶ ಭಟ್ ಕಡೆಕಾರು, ಭಕ್ತಾದಿಗಳು ಹಾಗೂ ಶ್ರೀಮಠದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ದೀಪಾವಳಿಯ ಪಾರಂಪರಿಕ ಆಚರಣೆಗಳನ್ನು ಮುಂದುವರಿಸುವ ಮೂಲಕ ಶ್ರೀಕೃಷ್ಣ ಮಠದಲ್ಲಿ ಧಾರ್ಮಿಕ ಸಂಭ್ರಮ ಮನೆಮಾಡಿತ್ತು.