ನಾಲ್ಕನೇ ಮಹಡಿಯ ಲಾಡ್ಜ್ ಕೊಠಡಿಯಲ್ಲಿ ಅಗ್ನಿ ಅವಘಡ

0
31

ಮಂಗಳೂರು : ಅತ್ತಾವರ ಕಟ್ಟೆ ಸಮೀಪದ ಲಾಡ್ಜ್ ಸಂಕೀರ್ಣದ ನಾಲ್ಕನೇ ಮಹಡಿಯ ಕೊಠಡಿಯೊಂದರಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಎಸಿ, ಹಾಸಿಗೆ, ಮಂಚ, ಫ್ಯಾನ್ ಸೇರಿದಂತೆ ಹಲವು ವಸ್ತುಗಳು ಸುಟ್ಟು ಹಾನಿಗೀಡಾದ ಘಟನೆ ನ.9ರ ಸೋಮವಾರ ರಾತ್ರಿ ನಡೆದಿದೆ.

ನೆಲಮಹಡಿ ಸೇರಿದಂತೆ ನಾಲ್ಕು ಮಹಡಿಗಳನ್ನು ಹೊಂದಿರುವ ವಾಣಿಜ್ಯ ಕಟ್ಟಡದ ಮೇಲ್ಭಾಗದಲ್ಲಿ ಲಾಡ್ಜ್ ಕಾರ್ಯನಿರ್ವಹಿಸುತ್ತಿದೆ. ಸೋಮವಾರ ರಾತ್ರಿ ಲಾಡ್ಜ್‌ನ ನಾಲ್ಕನೇ ಮಹಡಿಯ ಕೊಠಡಿಯೊಂದರಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ಕೊಠಡಿಯ ಕಿಟಕಿಯಿಂದ ದಟ್ಟ ಹೊಗೆ ಹಾಗೂ ಬೆಂಕಿ ಹೊರಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಮತ್ತು ಕಟ್ಟಡದಲ್ಲಿದ್ದವರು ಆತಂಕಗೊಂಡು ತಕ್ಷಣ ಹೊರಗೆ ಓಡಿಬಂದಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಕೊಠಡಿಯಲ್ಲಿದ್ದ ಎಸಿ ಯಂತ್ರದಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಅದೃಷ್ಟವಶಾತ್ ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ ಕೊಠಡಿಯಲ್ಲಿ ಯಾವುದೇ ಗ್ರಾಹಕರು ಇಲ್ಲದ ಕಾರಣ ಜೀವಹಾನಿ ಸಂಭವಿಸಿಲ್ಲ.

ಮಾಹಿತಿ ಲಭಿಸಿದ ತಕ್ಷಣ ಪಾಂಡೇಶ್ವರ ಅಗ್ನಿಶಾಮಕ ಠಾಣೆಯ ವಾಹನ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿದರು. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ನವಾಜ್ ಹಾಗೂ ಠಾಣಾಧಿಕಾರಿ ಪ್ರವೀಣ್ ಅವರ ನೇತೃತ್ವದಲ್ಲಿ ಸಿಬ್ಬಂದಿ ತ್ವರಿತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು.

ಅಗ್ನಿಶಾಮಕ ಸಿಬ್ಬಂದಿಯ ಸಮಯಪ್ರಜ್ಞೆ ಮತ್ತು ಸಮಯೋಚಿತ ಕಾರ್ಯಾಚರಣೆಯಿಂದ ಬೆಂಕಿ ಇತರ ಕೊಠಡಿಗಳಿಗೆ ಹಾಗೂ ಕಟ್ಟಡದ ಉಳಿದ ಭಾಗಗಳಿಗೆ ವ್ಯಾಪಿಸುವುದು ತಪ್ಪಿದೆ. ಇದರಿಂದ ಸಂಭವಿಸಬಹುದಾಗಿದ್ದ ಭಾರೀ ಆಸ್ತಿ ನಷ್ಟ ಹಾಗೂ ದೊಡ್ಡ ಅನಾಹುತವನ್ನು ತಪ್ಪಿಸಿದಂತಾಗಿದೆ.

ಬೆಂಕಿ ಅವಘಡಕ್ಕೆ ನಿಖರ ಕಾರಣದ ಕುರಿತು ಪರಿಶೀಲನೆ ನಡೆಯಬೇಕಿದ್ದು, ಘಟನೆಯಿಂದ ಲಾಡ್ಜ್ ಸಂಕೀರ್ಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.