ಗಾಂಧಿ ಜಯಂತಿಯ ಅಂಗವಾಗಿ “ಅವೇಕ್ ಕುಡ್ಲ” ಪರಿಕಲ್ಪನೆಯಡಿ ಸಂಚಾರ ನಿರ್ವಹಣೆ ಹಾಗೂ ಸ್ವಚ್ಛತಾ ಕಾರ್ಯಕ್ರಮ

0
6

ಗಾಂಧಿ ಜಯಂತಿಯ ಅಂಗವಾಗಿ ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ (ರಿ.) ವತಿಯಿಂದ “ಅವೇಕ್ ಕುಡ್ಲ” ಪರಿಕಲ್ಪನೆಯಡಿ ಅಕ್ಟೋಬರ್ 02, 2026 ರಂದು ಮಂಗಳಾದೇವಿ ದೇವಸ್ಥಾನ ರಸ್ತೆ ಮತ್ತು ಗುಜ್ಜರಕೆರೆ, ಜೆಪ್ಪುವಿನಲ್ಲಿ ಸಂಚಾರ ನಿರ್ವಹಣೆ ಹಾಗೂ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಸುಗಮ ಸಂಚಾರ, ಸ್ವಚ್ಛ ಪರಿಸರ ಮತ್ತು ಸಾರ್ವಜನಿಕರಲ್ಲಿ ಜವಾಬ್ದಾರಿಯುತ ನಾಗರಿಕ ಮನೋಭಾವ ಬೆಳೆಸುವ ಉದ್ದೇಶದಿಂದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಬೆಳಿಗ್ಗೆ 10:00ರಿಂದ ಮಧ್ಯಾಹ್ನ 2:00ರವರೆಗೆ ಮಂಗಳಾದೇವಿ ದೇವಸ್ಥಾನ ರಸ್ತೆಯಲ್ಲಿ ಟ್ರಸ್ಟ್‌ನ ಸಂಯೋಜಕರು ಸಂಚಾರ ನಿರ್ವಹಣಾ ಕಾರ್ಯದಲ್ಲಿ ಭಾಗವಹಿಸಿದರು. ಸಂಚಾರ ಪೊಲೀಸ್ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ವಾಹನಗಳ ಸುಗಮ ಸಂಚಾರಕ್ಕೆ ಸಹಕರಿಸಲಾಯಿತು. ವಾಹನಗಳನ್ನು ಸರಿಯಾದ ರೀತಿಯಲ್ಲಿ ಸಂಚರಿಸಲು ಹಾಗೂ ರಸ್ತೆ ಬದಿಗಳಲ್ಲಿ ಅನಗತ್ಯವಾಗಿ ವಾಹನ ನಿಲ್ಲಿಸದಂತೆ ಸಾರ್ವಜನಿಕರಿಗೆ ತಿಳುವಳಿಕೆ ನೀಡಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ಹಾಗೂ ಸಾರ್ವಜನಿಕರು ಕೂಡ ಸ್ವಯಂಪ್ರೇರಿತರಾಗಿ ಟ್ರಸ್ಟ್‌ನೊಂದಿಗೆ ಕೈಜೋಡಿಸಿ ಸಂಚಾರ ನಿರ್ವಹಣೆಗೆ ಸಹಕರಿಸಿದರು.

ಟ್ರಸ್ಟ್ ಕಳೆದ ಕೆಲವು ತಿಂಗಳುಗಳಿಂದ ಶುಕ್ರವಾರದಂದು ಮಂಗಳಾದೇವಿ ದೇವಸ್ಥಾನ ರಸ್ತೆಯಲ್ಲಿ ಸಂಚಾರ ನಿರ್ವಹಣಾ ಕಾರ್ಯವನ್ನು ಕೈಗೊಂಡು ಬರುತ್ತಿದ್ದು, ಸಂಚಾರ ಪೊಲೀಸರ ಮಾರ್ಗದರ್ಶನ ಮತ್ತು ಸ್ಥಳೀಯರ ಸಹಕಾರದೊಂದಿಗೆ ಈ ಕಾರ್ಯವನ್ನು ಮುಂದುವರಿಸಲಾಗುತ್ತಿದೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತರು, ಸ್ಥಳೀಯ ನಿವಾಸಿಗಳು ಹಾಗೂ ಇತರ ವಾಹನ ಸವಾರರಿಗೆ ಸುಗಮ ಮತ್ತು ಸುರಕ್ಷಿತ ಸಂಚಾರ ವ್ಯವಸ್ಥೆ ಕಲ್ಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ನಂತರ ಸಂಜೆ 4:00ರಿಂದ 6:00ರವರೆಗೆ ಗುಜ್ಜರಕೆರೆ, ಜೆಪ್ಪುವಿನಲ್ಲಿ ಸ್ವಚ್ಛತಾ ಶ್ರಮದಾನ ನಡೆಯಿತು. ಟ್ರಸ್ಟ್‌ನ ಸದಸ್ಯರು ಹಾಗೂ ಸಂಯೋಜಕರೊಂದಿಗೆ ಸ್ಥಳೀಯ ನಿವಾಸಿಗಳು, ಕೆರೆಗೆ ಆಗಮಿಸುವ ಸಾರ್ವಜನಿಕರು ಹಾಗೂ ಗಣ್ಯರು ಕೂಡ ಶ್ರಮದಾನದಲ್ಲಿ ಭಾಗವಹಿಸಿದರು. ಎಲ್ಲರೂ ಸೇರಿ ಕೆರೆಯ ಸುತ್ತಮುತ್ತಲಿನ ಪ್ರದೇಶವನ್ನು ಗುಡಿಸಿ ಸ್ವಚ್ಛಗೊಳಿಸುವುದು, ಪ್ಲಾಸ್ಟಿಕ್ ಮತ್ತು ಇತರ ತ್ಯಾಜ್ಯಗಳನ್ನು ಸಂಗ್ರಹಿಸುವುದು ಸೇರಿದಂತೆ ವಿವಿಧ ಸ್ವಚ್ಛತಾ ಕಾರ್ಯಗಳನ್ನು ಕೈಗೊಂಡರು.

ಕೆರೆಯ ಸುತ್ತಮುತ್ತ ಬೆಳೆದಿದ್ದ ಹೆಚ್ಚುವರಿ ಹುಲ್ಲು ಹಾಗೂ ಗಿಡಗಂಟಿಗಳನ್ನು ಕೂಡ ಟ್ರಸ್ಟ್ ವತಿಯಿಂದ ತೆರವುಗೊಳಿಸಲಾಯಿತು. ಶ್ರಮದಾನದ ಸಂದರ್ಭದಲ್ಲಿ ಕೆರೆಗೆ ಆಗಮಿಸಿದ್ದ ಸಾರ್ವಜನಿಕರೊಂದಿಗೆ ಸಂವಾದ ನಡೆಸಿ, ಕಸವನ್ನು ಎಲ್ಲೆಂದರಲ್ಲಿ ಎಸೆಯದಿರುವುದು, ತ್ಯಾಜ್ಯವನ್ನು ಮೂಲದಲ್ಲೇ ವಿಂಗಡಿಸುವುದು, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸದ ಬುಟ್ಟಿಗಳನ್ನು ಬಳಸುವುದು ಸೇರಿದಂತೆ ತ್ಯಾಜ್ಯ ನಿರ್ವಹಣೆಯ ಕುರಿತು ಅರಿವು ಮೂಡಿಸಲಾಯಿತು.

ಗುಜ್ಜರಕೆರೆಯ ಸ್ವಚ್ಛತೆ ಮತ್ತು ನಿರ್ವಹಣೆಗೆ ಸಂಬಂಧಿಸಿದ ವಿವಿಧ ಕಾರ್ಯಗಳನ್ನು ಟ್ರಸ್ಟ್ ಕಳೆದ ಮೂರು ವರ್ಷಗಳಿಂದ ಸಾರ್ವಜನಿಕರ ಸಹಕಾರದೊಂದಿಗೆ ನಡೆಸಿಕೊಂಡು ಬರುತ್ತಿದೆ. ಅದೇ ರೀತಿ “ಅವೇಕ್ ಕುಡ್ಲ” ಪರಿಕಲ್ಪನೆಯಡಿ ನಗರದ ಪ್ರಮುಖ ಸಮಸ್ಯೆಗಳಾದ ತ್ಯಾಜ್ಯ ನಿರ್ವಹಣೆ ಮತ್ತು ಸಂಚಾರ ನಿರ್ವಹಣೆಯ ಕುರಿತು ಸಾರ್ವಜನಿಕರು ಹಾಗೂ ಸಂಬಂಧಪಟ್ಟ ಇಲಾಖೆಗಳ ನಡುವೆ ಸಹಕಾರ ಮೂಡಿಸುವ ಪ್ರಯತ್ನವನ್ನು ಟ್ರಸ್ಟ್ ಮಾಡುತ್ತಿದೆ.

ಮಂಗಳೂರು ಸ್ವಚ್ಛವಾಗಿರಲು ಕೇವಲ ಸರ್ಕಾರಿ ಇಲಾಖೆಗಳ ಪ್ರಯತ್ನ ಸಾಕಾಗುವುದಿಲ್ಲ; ಸಾರ್ವಜನಿಕರ ಸಕ್ರಿಯ ಸಹಕಾರವೂ ಅಗತ್ಯ. ನಾವು ನಮ್ಮ ಮನೆಯಿಂದಲೇ ಕಸವನ್ನು ಸರಿಯಾಗಿ ವಿಂಗಡಿಸಿ, ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವ ಮೂಲಕ ಬದಲಾವಣೆಯನ್ನು ಆರಂಭಿಸಬಹುದು. “ನಮ್ಮ ಊರು – ನಮ್ಮ ಹೆಮ್ಮೆ”, ನಮ್ಮ ಪರಿಸರ – ನಮ್ಮ ಜವಾಬ್ದಾರಿ “ಎಂಬ ಮನೋಭಾವದೊಂದಿಗೆ ಎಲ್ಲರೂ ಒಂದಾಗಿ ಕೆಲಸ ಮಾಡಿದಾಗ ಮಾತ್ರ ಸ್ವಚ್ಛ, ಆರೋಗ್ಯಕರ ಮತ್ತು ಸುಸ್ಥಿರ ನಗರವನ್ನು ನಿರ್ಮಿಸಲು ಸಾಧ್ಯ.