ಉಡುಪಿ ಜಿಲ್ಲಾಕಚೇರಿ ಆವರಣದಲ್ಲಿ ದುರಂತ – ಮಾವಿನ ಹಣ್ಣು ತೆಗೆಯಲು ಹೋದ ಗ್ರಾಮ ಸಹಾಯಕ ಸಾವು, ಸರ್ಕಾರದ ನಿರ್ಲಕ್ಷ್ಯಕ್ಕೆ ಖಂಡನೆ

0
67

ಉಡುಪಿ : ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಾವಿನ ಹಣ್ಣು ತೆಗೆಯಲು ಹೋದ ವ್ಯಕ್ತಿಯೊಬ್ಬರು ವಿದ್ಯುತ್‌ ತಗುಲಿ ಮೃತಪಟ್ಟ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಮೃತರನ್ನು ಗ್ರಾಮ ಸಹಾಯಕ ಸದಾನಂದ ಎಂದು ಗುರುತಿಸಲಾಗಿದೆ.

ಘಟನೆಗೆ ಸಂಬಂಧಿಸಿ ಉಡುಪಿ ತುಳುನಾಡ ರಕ್ಷಣಾ ವೇದಿಕೆ ಸರ್ಕಾರದ ನಿರ್ಲಕ್ಷ್ಯವನ್ನು ತೀವ್ರವಾಗಿ ಖಂಡಿಸಿದ್ದು, ಭದ್ರತಾ ಕ್ರಮಗಳ ಕೊರತೆಯೇ ಇಂತಹ ದುರಂತಗಳಿಗೆ ಕಾರಣವಾಗುತ್ತಿದೆ ಎಂದು ಆರೋಪಿಸಿದೆ.

ಈ ಹಿನ್ನೆಲೆಯಲ್ಲಿ ವೇದಿಕೆಯ ಪದಾಧಿಕಾರಿಗಳು 24-04-2026 ರಂದು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಸಾರ್ವಜನಿಕ ಸ್ಥಳಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಮತ್ತು ಭದ್ರತಾ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪ್ರತಿನಿಧಿಗಳು ಆಗ್ರಹಿಸಿದರು.

ಮೃತರ ಕುಟುಂಬಕ್ಕೆ ತಕ್ಷಣ ಸೂಕ್ತ ಪರಿಹಾರ ನೀಡಬೇಕು. ಸರ್ಕಾರದಿಂದ ಆರ್ಥಿಕ ನೆರವು, ಉದ್ಯೋಗಾವಕಾಶ ಸೇರಿದಂತೆ ಮಾನವೀಯ ಸಹಾಯ ಒದಗಿಸಬೇಕೆಂದು ಮನವಿ ಸಲ್ಲಿಸಲಾಯಿತು. ಜೊತೆಗೆ ತಾಲೂಕು ಕಚೇರಿ ಸೇರಿದಂತೆ ಎಲ್ಲಾ ಸರ್ಕಾರಿ ಆವರಣಗಳಲ್ಲಿ ಭದ್ರತಾ ಕ್ರಮಗಳನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಫ್ರಾಂಕಿ ಡಿಸೋಜ ಕೊಳಲಗಿರಿ, ಜಿಲ್ಲಾ ಉಪಾಧ್ಯಕ್ಷ ಉಮೇಶ್ ಶೆಟ್ಟಿ, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಜಯ ಪೂಜಾರಿ (ಲಕ್ಷ್ಮೀನಗರ), ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ ಹಾಗೂ ಮುಖಂಡರಾದ ಮಮತಾ ಎನ್. ಶಂಕರ್, ಗುಣಾಕರ್ ಬೈರಂಪಳ್ಳಿ, ಸುಧೀಪ್ ಬೆಳ್ಳಾರ್ಪಾಡಿ, ಸಾಥ್ವಿಕ್ ಬೆಳ್ಳಾರ್ಪಾಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here